ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪವರ್‌ಮ್ಯಾನ್‌ಗಳ ಸಂಖ್ಯೆ ವಿಪರೀತ ಕಡಿಮೆ ಇರುವುದರಿಂದ ವಿದ್ಯುತ್ ಸಮಸ್ಯೆ ತಲೆದೋರಿದೆ. ದಕ್ಷಿಣ ಕನ್ನಡದ ಯುವಕರು ಪವರ್ ಮ್ಯಾನ್ ಆಗಲು ಆಸಕ್ತಿ ತೋರಿಸುತ್ತಿಲ್ಲ. ಕೆಲವರು ಆಯ್ಕೆಯ ಸಂದರ್ಭ ಅನರ್ಹರಾಗುತ್ತಾರೆ. ದಕ್ಷಿಣದಲ್ಲಿ ಶೇ.50 ಅಂಕ ಗಳಿಸಿದವರು ಅರ್ಜಿ ಸಲ್ಲಿಸಿದರೆ ಉತ್ತರ ಕರ್ನಾಟಕದಲ್ಲಿ ಶೇ.90 ಅಂಕ ಪಡೆದವರು ಅರ್ಜಿ ಸಲ್ಲಿಸಿ ಆಯ್ಕೆಯಾಗುತ್ತಿದ್ದಾರೆ. ಇಲ್ಲಿ ಹೆಚ್ಚು ಅಂಕ ಗಳಿಸಿದವರು ಪವರ್ ಮ್ಯಾನ್ ಆಗಲು ಆಸಕ್ತಿ ತೋರಿಸುತ್ತಿಲ್ಲ ಎಂದು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಮೆಸ್ಕಾಂ) ನೂತನ ಅಧ್ಯಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿದರು.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಉತ್ತರ ಭಾಗದವರು ಅದು ಹೇಗೆ ಅಷ್ಟು ಅಂಕ ಗಳಿಸಿ ಕೆಲಸ ಗಿಟ್ಟಿಸುತ್ತಾರೋ ಗೊತ್ತಿಲ್ಲ. ಇಲ್ಲಿನವರಿಗೆ ಪವರ್ ಮ್ಯಾನ್ ಹುದ್ದೆಯ ಮೇಲೆ ಆಸಕ್ತಿ ಇಲ್ಲ. ನಮ್ಮಲ್ಲಿ ಸುಮಾರು 400 ಕ್ಕೂ ಅಧಿಕ ಪವರ್ ಮ್ಯಾನ್ ಹುದ್ದೆ ಖಾಲಿ ಇದ್ದು, ಯುವಕರು ಆಸಕ್ತಿ ತೋರಿಸಬೇಕು. ಮೂರು ವರ್ಷಗಳವರೆಗೆ ಬೇರೆ ಊರಿನಲ್ಲಿ ಕೆಲಸ ಮಾಡಿ, ಮತ್ತೆ ತಮಗೆ ಬೇಕಾದಲ್ಲಿಗೆ ವರ್ಗಾವಣೆ ಮಾಡಿಕೊಳ್ಳಬಹುದು. ಇಲ್ಲಿನ ಯುವಕರನ್ನು ಪವರ್‌ಮ್ಯಾನ್ ಆಗುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದರು.
ಇಲ್ಲಿ ವಿದ್ಯುತ್ ಸಮಸ್ಯೆ ತಲೆದೋರದಂತೆ ಪವರ್‌ಮ್ಯಾನ್‌ಗಳ ವರ್ಗಾವಣೆ ತಡೆ ಹಿಡಿದು ಕೆಲಸ ಮಾಡಿಸುತ್ತಿದ್ದೇವೆ. ಕೆಲವು ಸಂದರ್ಭ ಹೊರಗಿನವರನ್ನು ಕೆಲಸಕ್ಕೆ ನಿಯೋಜಿಸುತ್ತೇವೆ. ಆದರೆ ವಿದ್ಯುತ್ ಕಂಬ ಹತ್ತಿಸುವಂತಹ ಕೆಲಸಕ್ಕೆ ಅವರನ್ನು ಹಾಕುವುದು ಅಪಾಯ. ಹತ್ತು ಸಾವಿರ ಪವರ್‌ಮ್ಯಾನ್ ಹುದ್ದೆಗಳಲ್ಲಿ 4028 ಹುದ್ದೆಗಳು ಖಾಲಿ ಇದ್ದು, ನಮ್ಮ ವ್ಯಾಪ್ತಿಯಲ್ಲೇ ನಾಲ್ನೂರು ಹುದ್ದೆಗಳು ಖಾಲಿಯಾಗುತ್ತದೆ. ಇಲ್ಲಿನವರೇ ಪವರ್‌ಮ್ಯಾನ್ ಆದ ವಿದ್ಯುತ್ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದರು.
ಮೆಸ್ಕಾಂ ಲಾಭದಲ್ಲಿ ಸಾಗುತ್ತಿದ್ದು, ಆಗಸ್ಟ್ ವರೆಗಿನ ಬಿಲ್ಲು ಮುಂಗಡವಾಗಿ ಸರ್ಕಾರದಿಂದ ಬಂದಿದೆ. ಇದು ಇನ್ನೂ ಅಭಿವೃದ್ಧಿಯಾಗಬೇಕಿದೆ. ವಿದ್ಯುತ್ ಕಡಿತವಾಗದಂತೆ, ಗೃಹಬಳಕೆ, ಕೈಗಾರಿಕೆಗಳಿಗೆ ನಿರಂತರ ವಿದ್ಯುತ್ ಪೂರೈಕೆ, ಕೆಟ್ಟು ಹೋದ ಟ್ರಾನ್ಸ್‌ಫಾರ್ಮರ್ ಕಂಬಗಳ ಶೀಘ್ರ ಬದಲಾವಣೆ ಇತ್ಯಾದಿ ಕೆಲಸಗಳನ್ನು ನಡೆಸಿ ಮೆಸ್ಕಾಂ ಇಲಾಖೆಯನ್ನು ಜನಸ್ನೇಹಿಯನ್ನಾಗಿಸಲಾಗುವುದು ಎಂದು ಹರೀಶ್ ಕುಮಾರ್ ಹೇಳಿದರು.
ಹಗಲು ಹೊತ್ತಿನಲ್ಲಿ ಬೀದಿ ದೀಪಗಳು ಉರಿಯದಂತೆ ಜನರು ಅದನ್ನು ಸ್ವತಃ ಆರಿಸಿಕೊಳ್ಳಬೇಕು. ಕೆಲವು ಪಂಚಾಯತ್‌ಗಳಿಂದ ವಿದ್ಯುತ್ ಬಿಲ್ ಬಾಕಿ ಇದೆ, ಈಗ ನಾನು ನೂತನವಾಗಿ ಅಧ್ಯಕ್ಷನಾಗಿರುವುದರಿಂದ ಎಲ್ಲವನ್ನೂ ಪರಿಶೀಲಿಸಿ ಸಮಸ್ಯೆ ಇದ್ದಲ್ಲಿ ಸರಿಪಡಿಸಲಾಗುವುದು ಎಂದರು.
ಭಾಗವತ್‌ಗೆ ಮೋದಿ ಮೇಲೆ ನಂಬಿಕೆ ಇಲ್ಲ
ನೇಪಾಳ, ಶ್ರೀಲಂಕಾ ದಂಗೆಗೆ ಅಲ್ಲಿನ ನಾಯಕತ್ವ ವಿಫಲತೆಯೇ ಕಾರಣ, ಈ ದೇಶದಲ್ಲೂ ನಾಯಕರು ಜನರ ಸಂಪರ್ಕ ಸಾಧಿಸಲು ವಿಫಲವಾದರೆ ಭಾರತದಲ್ಲೂ ದಂಗೆ ನಡೆಯಬಹುದು ಎಂದು ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಹೇಳಿದ್ದಾರೆ. ಸ್ವತಃ ಭಾಗವತ್‌ಗೆ ಮೋದಿ ಮೇಲೆ ನಂಬಿಕೆ ಇಲ್ಲ ಎನ್ನುವುದು ಅವರ ಬಾಯಿಯಿಂದಲೇ ಬಂದಿದೆ ಎಂದರು.
ರಾಜ್ಯದಲ್ಲಿ ನಕ್ಸಲರು ಶರಣಾದಾಗ ಬೊಬ್ಬೆ ಹೊಡೆದಿದ್ದ ಬಿಜೆಪಿಯವರು ಇದೀಗ ಅವರದ್ದೇ ಆಡಳಿತದಲ್ಲಿರುವ ಛತ್ತೀಸ್‌ಗಡದಲ್ಲಿ ಅನೇಕ ನಕ್ಸಲರು ಶರಣಾಗಿದ್ದಾರೆ ಈ ಬಗ್ಗೆ ಅವರು ಏನು ಹೇಳುತ್ತಾರೆ? ಕರ್ನಾಕಟದಲ್ಲಿ ಬೀಫ್ ತಿನ್ನಬಾರದು ಎಂದು ಬಿಜೆಪಿಗರು ಹೇಳಿದರೆ ಮೇಘಾಲಯ, ಗೋವಾದ ಅವರದ್ದೇ ನಾಯಕರು ಬೀಫ್ ನಮ್ಮ ಆಹಾರ, ತಿನ್ತೇವೆ ಅನ್ತಾರೆ? ಯಾಕೆ ಈ ಇಬ್ಬಗೆ ನೀತಿ? ಹೀಗಾಗಿಯೇ ಬೀಫ್ ರಫ್ತಿನಲ್ಲಿ ಭಾರತ ನಂಬರ್ ವನ್ ಸ್ಥಾನ ಗಿಟ್ಟಿಸಿದೆ ಎಂದರು.
ಲಾವಣ್ಯ ಬಲ್ಲಾಳ್, ಶಶಿಧರ್ ಹೆಗ್ಡೆ, ಎಸ್ ಅಪ್ಪಿ, ನಿರಾಜ್ ಪಾಲ್, ಸುಹಾನ್ ಆಳ್ವಾ, ಚಿತ್ತಾರಜನ್ ಶೆಟ್ಟಿ, ಟಿ ಕೆ ಸುದೀರ್, ವಿಕಾಸ್ ಶೆಟ್ಟಿ, ಶುಭೋದಯ ಆಳ್ವಾ, ಜಿತೇಂದ್ರ ಸುವರ್ಣ ಉಪಸ್ಥಿತರಿದ್ದರು.