ಮುಂಬೈ: ಸೈಬರ್ ಜಾಗೃತಿ ಸಪ್ತಾಹ 2025 ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್, ತಮ್ಮ 13 ವರ್ಷದ ಮಗಳು ನಿತಾರಾ ಆನ್ಲೈನ್ ಗೇಮ್ ಆಡುವಾಗ ಸೈಬರ್ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
‘ನನ್ನ 13 ವರ್ಷದ ಪುತ್ರಿ ಆನ್ಲೈನ್ನಲ್ಲಿ ಗೇಮ್ ಆಡುತ್ತಿದ್ದರು. ಆನ್ಲೈನ್ನಲ್ಲಿ ಅನಾಮಿಕನೊಟ್ಟಿಗೆ ಗೇಮ್ ನಡೆದಿತ್ತು. ಆ ಬದಿಯ ವ್ಯಕ್ತಿ ನೀನು ಪುರುಷನೋ ಅಥವಾ ಮಹಿಳೆಯೋ ಎಂದು ಕೇಳಿದ್ದಾನೆ. ನನ್ನ ಪುತ್ರಿ ತಾನು ಯುವತಿ ಎಂದು ಹೇಳಿದ ಕೂಡಲೇ, ಆ ಬದಿಯಲ್ಲಿದ್ದ ವ್ಯಕ್ತಿ ನಗ್ನ ಚಿತ್ರಗಳನ್ನು ಕಳಿಸುವಂತೆ ಕೇಳಿದ್ದಾನೆ. ಇದರಿಂದ ಆತಂಕಕ್ಕೆ ಒಳಗಾದ ನನ್ನ ಪುತ್ರಿ ಕೂಡಲೇ ತಾಯಿಯ ಬಳಿ ವಿಷಯ ಹೇಳಿದ್ದಾಳೆ’ ಎಂದು ಅಕ್ಷಯ್ ಕುಮಾರ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ, ಬಹಳ ಮಕ್ಕಳು ಬ್ಲ್ಯಾಕ್ಮೇಲ್ ಗೆ ಒಳಪಡುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಘಟನೆಯ ಮೂಲಕ ಸೈಬರ್ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಅಕ್ಷಯ್ ಕುಮಾರ್ ಅವರ ಈ ಹೇಳಿಕೆ ಸಹಾಯ ಮಾಡಿದೆ. ಪೋಷಕರು ಮತ್ತು ಮಕ್ಕಳು ಅಂತರ್ಜಾಲದಲ್ಲಿ ಎಚ್ಚರಿಕೆಯಿಂದಿರಬೇಕು ಮತ್ತು ಯಾವುದೇ ಅನುಭವಿಸಿದ ದೌರ್ಜನ್ಯವನ್ನು ತಕ್ಷಣ ನಂಬಿಗಸ್ತರಿಗೆ ತಿಳಿಸಬೇಕು ಎಂಬ ಸಂದೇಶವನ್ನು ಇದು ನೀಡುತ್ತದೆ.
ಮಹಾರಾಷ್ಟ್ರ ರಾಜ್ಯದಲ್ಲಿ ಏಳನೇ, ಎಂಟನೇ, ಒಂಬತ್ತನೇ ಮತ್ತು ಹತ್ತನೇ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೆ ಒಂದು ತರಗತಿ ಸೈಬರ್ ಅಪರಾಧ ಎಂದರೇನು? ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ? ಸೈಬರ್ ಕ್ರೈಂ ಆದಾಗ ಏನು ಮಾಡಬೇಕು? ಎಂಬುದರ ಕುರಿತು ಅರಿವು ಮೂಡಿಸಬೇಕು.
“ಈ ಬಗ್ಗೆ ನಾನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಲ್ಲಿ ವಿನಂತಿಸುತ್ತೇನೆ, ತರಗತಿಗಳಲ್ಲಿ ಮಕ್ಕಳಿಗೆ ಅದರ ಬಗ್ಗೆ ವಿವರಿಸಬೇಕು. ಈ ಅಪರಾಧವು ಬೀದಿ ಅಪರಾಧಕ್ಕಿಂತ ದೊಡ್ಡದಾಗುತ್ತಿದೆ. ಈ ಬಗ್ಗೆ ಎಲ್ಲರಿಗೂ ಅರಿವಿರಬೇಕು. ಇಂತಹ ಅಪರಾಧಗಳನ್ನು ತಡೆಯಬೇಕು. ಮಕ್ಕಳ ಭವಿಷ್ಯ ಕಾಪಾಡಬೇಕು’ ಎಂದು ಅಕ್ಷಯ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.