ಕುಂದಾಪುರ: ಕುಂದಾಪುರದ ಹಳೆಯ ತಾಲೂಕು ಕಚೇರಿ ಬಳಿಯಿದ್ದ ದಶಕಗಳಷ್ಟು ಹಳೆಯದಾದ ಬೃಹತ್ ಗಾತ್ರದ ದೇವದಾರಿ ಮರವು ಗುರುವಾರ(ಅ.2) ಸಂಜೆ ಬುಡ ಸಮೇತ ಉರುಳಿ ಬಿದ್ದಿದ್ದು, ಕುಂದಾಪುರ ಮಾರ್ಕೆಟ್ ಉಪ ಅಂಚೆ ಕಚೇರಿ ಕಟ್ಟಡಕ್ಕೆ ಬಹುತೇಕ ಹಾನಿಯಾಗಿದೆ.
ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರ ಕಚೇರಿ ಸಮೀಪದಲ್ಲಿದ್ದ ಅಂಚೆ ಕಚೇರಿ ಕಟ್ಟಡದ ಮೇಲೆ ಮರ ಬಿದ್ದ ಪರಿಣಾಮ, ಸಮೀಪದ ವಿದ್ಯುತ್ ಕಂಬಗಳಿಗೂ ಹಾನಿ ಸಂಭವಿಸಿದೆ. ಅದೃಷ್ಟವಶಾತ್, ಅಂದು ಸರ್ಕಾರಿ ರಜೆ ಇದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜೊತೆಗೆ ಘಟನೆ ವೇಳೆ ಸ್ಥಳದಲ್ಲಿ ಯಾರೂ ಇಲ್ಲದ್ದರಿಂದ ಸಂಭವನೀಯ ಅಪಾಯ ತಪ್ಪಿದೆ. ಮರವು ನೇರವಾಗಿ ಕಟ್ಟಡದ ಮೇಲೆ ಬಿದ್ದಿದೆ. ಬಿದ್ದ ಮರವು ಕಟ್ಟಡಕ್ಕೆ ವಾಲಿಕೊಂಡಿದೆ.
ಮರ ಬಿದ್ದ ಪ್ರದೇಶವು ಸಾಮಾನ್ಯವಾಗಿ ಜನಜಂಗುಳಿಯಿಂದ ಕೂಡಿರುವುದರ ಜೊತೆಗೆ ಹಲವಾರು ವಾಹನಗಳನ್ನು ಅಲ್ಲಿ ನಿಲ್ಲಿಸಲಾಗುತ್ತಿತ್ತು. ಅಂಚೆ ಕಚೇರಿಗೂ ಭೇಟಿ ನೀಡುವ ಜನರ ಸಂಖ್ಯೆ ಅಧಿಕವಿರುತ್ತಿತ್ತು. ಅಕ್ಟೋಬರ್ 2 ರಂದು ವಿಜಯದಶಮಿ ಮತ್ತು ಗಾಂಧಿ ಜಯಂತಿಯ ಹಿನ್ನೆಲೆ ಸರ್ಕಾರಿ ರಜೆ ಇದ್ದುದರಿಂದ ಸಂಭವನೀಯ ಭಾರೀ ಅನಾಹುತ ತಪ್ಪಿದಂತಾಗಿದೆ.
ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್, ಮೆಸ್ಕಾಂ, ಅರಣ್ಯ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ.