ಮಂಗಳೂರು: ಜಾತಿ ಜನಗಣತಿಯ ಸಂದರ್ಭ ಮಾಹಿತಿ ಕೊಡಲು ಜನರಿಗೆ ಒತ್ತಡ ಹಾಕುವಂತಿಲ್ಲ ಎಂದು ಹಿಂದುಳಿದ ವರ್ಗದ ಆಯೋಗ ಹಾಗೂ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಆದರೆ ಗಣತಿಯನ್ನು ತ್ಯಜಿಸಲು ಯಾವುದೇ ಆಯ್ಕೆ ಇಲ್ಲ. ಜನರು ನಿರಾಕರಿಸಿದರೆ ಜನಗಣತಿ ಪೂರ್ತಿಯಾಗಿಲ್ಲ ಎಂದು ಅಪ್ಲಿಕೇಷನ್ ತೋರಿಸುತ್ತದೆ. ಬರೆದುಕೊಟ್ಟರೂ ಆಪ್ ಅದನ್ನು ಸ್ವೀಕರಿಸುವುದಿಲ್ಲ. ಹಾಗಾಗಿ ಈ ಜನಗಣತಿ ಕಾಂತರಾಜ್, ಜಯಪ್ರಕಾಶ್ ವರದಿಯಂತೆ ದುಡ್ಡು ಪೋಲು ಮಾಡುವ ಜನಗಣತಿ ಎಂದು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಹಿಂದು ಹಬ್ಬ ಇರುವ ಸಮಯವೇ ಸಮೀಕ್ಷೆ ನಡೆಸುತ್ತಿದ್ದಾರೆ. ಬೇರೆ ಧರ್ಮದವರ ಹಬ್ಬ ಇರುತ್ತಿದ್ದರೆ ಆ ಸಮಾಜದವರು ಬಿಡ್ತಾ ಇದ್ರಾ? ಉದ್ದೇಶಪೂರ್ವಕವಾಗಿ ಶಿಕ್ಷಕರ ರಜೆಯನ್ನು ಕಳೆದು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಸರ್ಕಾರದ ಅಧಿಕಾರಿಗಳಿಗೆ ತೊಂದರೆಗಳನ್ನು ನೀಡುತ್ತಿದ್ದಾರೆ. ಸಿದ್ದರಾಮಯ್ಯಗೆ ಹಿಂದು ಅಂದ್ರೆ ಆಗಲ್ಲ ಹಾಗಾಗಿ ದಸರವನ್ನು ನುಂಗಿ ನೀರು ಕುಡಿದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನಮಗೆ ಬಂದ ಗ್ರೌಂಡ್ ರಿಪೋರ್ಟ್ ಪ್ರಕಾರ ಸಮೀಕ್ಷೆ ಸರಿಯಾಗಿ ಹೋಗ್ತಾ ಇಲ್ಲ. ಇದೊಂದು ಗೊಂದಲದ ಸಮೀಕ್ಷೆ ಎಂದು ಮೊದಲೇ ಆಕ್ಷೇಪ ಮಾಡಿದ್ದೆವು. ಈಗ ಅದು ಗೊತ್ತಾಗುತ್ತಾ ಇದೆ. ಸರಿಯಾದ ಸಿಬ್ಬಂದಿ ನೇಮಕ ಆಗಿಲ್ಲ, ಸರ್ವರ್ ಸಿಗುವುದಿಲ್ಲ ಎಂದು ಆರೋಪಿಸಿದರು. ದಸರ ಹಬ್ಬದ ಸಮಯ ಸಮೀಕ್ಷೆಗೆ ಆಕ್ಷೇಪ ಇತ್ತು. ಶಿಕ್ಷಕರಿಗೆ ರಜೆ ಇಲ್ಲದೆ ಶಾಲೆಗಳಲ್ಲಿ ಶಾರದ ಪೂಜೆ ನಿಂತಿದೆ. ದಸರಾ ನಾಡಿನ ಹಬ್ಬವಾಗಿದೆ. ಈ ಸಂದರ್ಭ ಸಾಂಸ್ಕೃತಿ ಕಾರ್ಯಕ್ರಮ, ದೇವಸ್ಥಾನಕ್ಕೆ ಕುಟುಂಬದೊಂದಿಗೆ ಹೋಗುವುದ ರೂಢಿ. ಶಾಲಾ ಪ್ರವಾಸ ಕೂಡ ಇದೇ ಸಂದರ್ಭದಲ್ಲಿ ನಡೆಯುತ್ತಿತ್ತು. ಆದರೆ ದಸರ ಸಂದರ್ಭವೇ ಸಮೀಕ್ಷೆ ಇಟ್ಟುಕೊಂಡು ಹಿಂದೂ ಧಾರ್ಮಿಕ ಭಾವನೆಗೆ ಸಿದ್ದರಾಮಯ್ಯ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.
ತರಾತುರಿಯ ಸಮೀಕ್ಷೆ ನಡೆಸಿ ಎಲ್ಲವನ್ನೂ ನೀರಲ್ಲಿ ಹೋಮ ಮಾಡಿದಂತಾಗಿದೆ. ಶಿಕ್ಷಕರು ಸಣ್ಣಮಟ್ಟದ ಟ್ರೈನಿಂಗ್ ಕೊಟ್ಟಿದ್ದಾರೆ. ಆದರೆ ಬೇರೆ ಸಿಬ್ಬಂದಿಗೆ ತರಬೇತಿ ಇಂತಿಷ್ಟು ದಿನಗಳಲ್ಲಿ ಮುಗಿಸಬೇಕೆಂದು ಒತ್ತಡ ಹಾಕಿದ್ದಾರೆ. ಜನರು ಇಂದಿಗೂ ಮಾಹಿತಿ ಕೊಡ್ಬೇಕ ಬೆಡ್ವಾ ಎಂಬ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. . ಸಮೀಕ್ಷೆಗೆ ಬಿಜೆಪಿಯ ಆಕ್ಷೇಪವಿಲ್ಲ, ಆದರೆ ಜಾತಿಯ ಗೊಂದಲ ನಿವಾರಣೆ ಮಾಡಿಲ್ಲ ಎಂದು ಆರೋಪಿಸಿದರು.
ಅಪ್ಲಿಕೇಶನ್‌ನಲ್ಲಿ 60 ಪ್ರಶ್ನೆಗಳಿವೆ. ಅದರಲ್ಲಿ ಒಂದನ್ನು ಬ್ಲಾಂಕ್ ಬಿಟ್ಟರೂ ಅಪ್ಲೋಡ್ ಆಗುವುದಿಲ್ಲ. ಜೊತೆಗೆ ಸರ್ವರ್ ಕೂಡ ಕೈ ಕೊಡುತ್ತಿದೆ. ಇದರ ನಡುವೆ ಸಿದ್ದರಾಮಯ್ಯ 10 ದಿನಗಳಲ್ಲಿ ಸಮೀಕ್ಷೆ ಮುಗಿಸಬೇಕೆಂದು ಒತ್ತಡ ಹಾಕ್ತಾ ಇದ್ದಾರೆ ಇದು ಸಾಧ್ಯವಾ ಎಂದು ಕುಂಪಲ ಪ್ರಶ್ನಿಸಿದರು.
ಬಂಟ್ವಾಳದ ಶಿಕ್ಷಣ ಅಧಿಕಾರಿಯ ವರ್ಗಾವಣೆ ಆಗಿದೆ ಎಂಬ ಮಾಹಿತಿ ಇದೆ. ಇದಕ್ಕೆ ಯಾರು ಕಾರಣ? ಸರ್ವರ್ ಸಿಗದಿದ್ದರೆ ಅವರು ಹೇಗೆ ಜವಾಬ್ದಾರರಾಗುತ್ತಾರೆ? ಶಿಕ್ಷಕರನ್ನು ದಿನದಿಂದ ದಿನಕ್ಕೆ ಬೇರೆ ಬೇರೆ ಕಡೆ ಹಾಕುವುದರಿಂದ ಅವರೂ ಗೊಂದಲದಲ್ಲಿದ್ದಾರೆ. ಸಮೀಕ್ಷೆಯನ್ನು ಮುಂದಕ್ಕೆ ಹಾಕಿದ್ದರೆ ಏನಾಗುತ್ತಿತ್ತು? ಅಷ್ಟೊಂದು ತರಾತುರಿ ಯಾಕೆ? ನರ್ಸ್, ಅನುದಾನಿತ ಶಾಲಾ ಶಿಕ್ಷಕರನ್ನೂ ಬಳಕೆ ಮಾಡಲಾಗುತ್ತಿದೆ. ಇದೀಗ ಸರ್ಕಾರಿ ನೌಕರರಿಗೆ ನೌಕರಿಯೇ ಬೇಡ ಅನ್ನುವಂತಾಗಿದೆ. ಈ ಸಮೀಕ್ಷೆಯಿಂದ ಸರ್ವರಿಗೂ ಸಮಪಾಲು ಸಿಗದು, ಸಾಮಾಜಿಕ ವ್ಯವಸ್ಥೆ ಸರಿಯಾಗದು. ಕಾಂತರಾಜು, ಜಯಪ್ರಕಾಶ್ ವರದಿಯಂತೆ ಕೋಟಿಗಟ್ಟಲೆ ತೆರಿಗೆ ಹಣ ಪೋಲು ಮಾಡುವ ಸಮೀಕ್ಷೆ ಇದಾಗಿದೆ. ಸರಿಯಾದ ಸಮಯವಕಾಶ, ಶಿಕ್ಷಕರಿಗೆ ಸೂಕ್ತ ತರಬೇತಿ ಕೊಟ್ಟು, ಮಾನಸಿಕ ಕಿರುಕುಳ ಕೊಡದೆ ಸಮೀಕ್ಷೆ ಮಾಡ್ಬೇಕು ಎಂದು ಕುಂಪಲ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮುಖಂಡರಾದ ಸಂಜಯ್ ಪ್ರಭು, ಜಿಲ್ಲಾ ವಕ್ತಾರ ಅರುಣ್ ಶೇಟ್ ಮತ್ತಿತರರು ಉಪಸ್ಥಿತರಿದ್ದರು.