ಮಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಮತ್ತಷ್ಟು ಗಂಭೀರ ಹಂತಕ್ಕೆ ತಲುಪಿದೆ. ವಿಶೇಷ ತನಿಖಾ ತಂಡವು (SIT) ಚಿನ್ನಯ್ಯ ಮತ್ತು ಅವರ ಕುಟುಂಬಕ್ಕೆ ಯಾವ ಮೂಲಗಳಿಂದ ಹಣಕಾಸು ನೆರವು ಲಭಿಸಿದೆ ಎಂಬುದನ್ನು ಪತ್ತೆಹಚ್ಚಲು ಬ್ಯಾಂಕ್ ಖಾತೆಗಳ ವಿವರಗಳನ್ನು ಜಾಲಾಡುತ್ತಿದೆ.
ಮೂಲಗಳ ಪ್ರಕಾರ, ಚಿನ್ನಯ್ಯನ ಮಗಳ ಖಾತೆಗೆ ಗಿರೀಶ್ ಮಟ್ಟಣ್ಣನವರ್ ಅವರ ಪತ್ನಿ ಭವ್ಯತಾ ಅವರ ಖಾತೆಯಿಂದ ₹4,150 ವರ್ಗಾವಣೆ ನಡೆದಿರುವುದು ಬೆಳಕಿಗೆ ಬಂದಿದೆ. ಬಸ್ ಪ್ರಯಾಣಕ್ಕೆ ಖರ್ಚು ಬೇಕು ಎಂಬ ಕಾರಣದಿಂದ ಈ ಹಣ ನೀಡಲಾಗಿದೆ ಎಂದು ಭವ್ಯತಾ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸರ್ವೀಸ್ ಅಪಾರ್ಟ್‌ಮೆಂಟ್ ಸಿಬ್ಬಂದಿಯ ಹೇಳಿಕೆಗಳನ್ನು ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿ ದಾಖಲಿಸಲಾಗಿದೆ. ಇತ್ತೀಚೆಗೆ ಚಿನ್ನಯ್ಯನನ್ನು ಕರೆದೊಯ್ಯಲಾಗಿದ್ದ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಮಹಜರು ಕೂಡ ನಡೆಸಲಾಗಿತ್ತು.
ಬೆಂಗಳೂರಿನ ತಿಂಡ್ಲು ಪ್ರದೇಶದ ಎಸ್‌ಬಿ ಮ್ಯಾನ್ಷನ್ ಎಂಬ ಸರ್ವೀಸ್ ಅಪಾರ್ಟ್‌ಮೆಂಟ್ ಗಿರೀಶ್ ಮಟ್ಟಣ್ಣನವರ್ ವಾಸಿಸುತ್ತಿರುವ ಪ್ಲಾಟ್ ಸಮೀಪದಲ್ಲಿದೆ. ಈ ಸ್ಥಳದಲ್ಲಿ ಚಿನ್ನಯ್ಯನ ತಂಡವು ಆಗಾಗ ಭೇಟಿ ನೀಡಿರುವ ಮಾಹಿತಿ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ. ಸುಮಾರು ನಾಲ್ಕು-ಐದು ತಿಂಗಳ ಹಿಂದೆ ಚಿನ್ನಯ್ಯ ಮತ್ತು ಅವರ ಸಹಚರರು ಈ ಅಪಾರ್ಟ್‌ಮೆಂಟ್‌ನಲ್ಲಿ ಸೇರಿದ್ದರೆಂಬ ವಿವರ ಸಿಕ್ಕಿದೆ.
ಬುರುಡೆ ಪ್ರಕರಣದ ಕುರಿತು ಗಿರೀಶ್ ಮತ್ತು ಜಯಂತ್ ಸೇರಿ ಹಲವರೊಂದಿಗೆ ಚರ್ಚೆಗಳು ನಡೆದಿದ್ದವೆಂಬುದು ಹೇಳಿಕೆಗಳಲ್ಲಿ ಹೊರಬಂದಿದೆ. ಯಾವಾಗ, ಎಷ್ಟು ಮಂದಿ, ಯಾವ ರೂಂನಲ್ಲಿ ಉಳಿದಿದ್ದರು, ಯಾರ ಹೆಸರಲ್ಲಿ ರೂಂ ಬುಕ್ ಮಾಡಲಾಗಿತ್ತು ಹಾಗೂ ಎಷ್ಟು ಬಾರಿ ಬುಕ್ ಮಾಡಲಾಗಿದೆ ಎಂಬ ಬಗ್ಗೆ ಸಿಬ್ಬಂದಿಯಿಂದ ವಿವರ ಸಂಗ್ರಹಿಸಲಾಗಿದೆ.
ತನಿಖೆಯೊಂದಿಗೆ ಸಂಬಂಧಿಸಿದಂತೆ ಇನ್ನೂ ಹಲವು ಹೆಸರುಗಳು ಬಹಿರಂಗವಾಗುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಹೊಸ ಅಂಶಗಳು ಹೊರಬರುವ ನಿರೀಕ್ಷೆ ವ್ಯಕ್ತವಾಗಿದೆ.