ಬೆಂಗಳೂರು: ನಟಿ ರಕ್ಷಿತಾ ಶೆಟ್ಟಿ ಹೊಸ ಹುರುಪಿನಿಂದ ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಪ್ರವೇಶಿಸಿದರೂ, ಕೆಲವೇ ದಿನಗಳಲ್ಲಿ ಹೊರ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಅವರು ಎಲಿಮಿನೇಟ್ ಆಗಿಲ್ಲ ಎಂಬ ಸುದ್ದಿ ಮೊದಲು ಹರಿದಾಡಿ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟಿಸಿತ್ತಾದರೂ, ನಂತರ ಕಲರ್ಸ್ ಕನ್ನಡ ಅಧಿಕೃತವಾಗಿ ಅವರು ಶೋನಿಂದ ಹೊರಬಿದ್ದಿದ್ದಾರೆ ಎಂದು ಘೋಷಿಸಿದೆ. ಮುಖ್ಯವಾಗಿ ಆಕೆಗೆ ಕನ್ನಡ ಗೊತ್ತಿಲ್ಲದ ಕಾರಣ, ಆಕೆಗೆ ಮಾತನಾಡಲು ಕಷ್ಟ ಆಗುತ್ತಿರುವುದರಿಂದ ಬಿಗ್‌ಬಾಸ್‌ನಿಂದ ಎಲಿಮಿನೇಟ್ ಮಾಡಲಾಗಿದೆ ಎಂಬ ವಿಚಾರಗಳು ಚರ್ಚೆಯಲ್ಲಿದೆ.
ಮುಂಬೈನಿಂದ ಕರ್ನಾಟಕಕ್ಕೆ ಬಂದು ಕನ್ನಡ ಕಲಿಯಲು ಪ್ರಯತ್ನಿಸುತ್ತಿದ್ದ ರಕ್ಷಿತಾ ಶೆಟ್ಟಿಯ ಪ್ರಯತ್ನ ಕೆಲವರ ಮೆಚ್ಚುಗೆಯನ್ನು ಗಳಿಸಿತ್ತು. ಆದರೆ, ಟ್ರೋಲ್‌ಗಳಿಗೂ ಅವರು ಗುರಿಯಾಗಿದ್ದರು. ಶೋ ಪ್ರಾರಂಭದಲ್ಲೇ ಹೊರಬಿದ್ದಿರುವುದು ಅವರ ಅಭಿಮಾನಿಗಳಿಗೆ ನಿರಾಶೆ ತಂದಿದೆ.
ರಕ್ಷಿತಾ ಶೆಟ್ಟಿ, ಸ್ಪಂದನ ಮತ್ತು ಮಾಳು ಒಟ್ಟಿಗೆ ಮನೆಯಲ್ಲಿ ಪ್ರವೇಶಿಸಿದ್ದರು. ಈ ಮೂವರಲ್ಲಿ ಇಬ್ಬರು ಜೋಡಿಯಾಗಿ, ಒಬ್ಬರು ಒಂಟಿಯಾಗಿ ಮುಂದುವರಿಯಬೇಕು ಎಂಬ ಬಿಗ್ ಬಾಸ್ ಆದೇಶದಂತೆ ಮನೆಯಲ್ಲಿ ಇದ್ದ ಸ್ಪರ್ಧಿಗಳೇ ತೀರ್ಮಾನ ತೆಗೆದುಕೊಂಡು ರಕ್ಷಿತಾರನ್ನು ಹೊರಗೆ ಕಳುಹಿಸಿದರು. ವೋಟಿಂಗ್ ಪ್ರಕ್ರಿಯೆ ಇಲ್ಲದೆ ಕೇವಲ ಆರು ಜನರ ನಿರ್ಧಾರದಿಂದ ಅವರನ್ನು ಹೊರಹಾಕಿರುವುದು ನ್ಯಾಯಸಮ್ಮತವಲ್ಲ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಕ್ಷಿತಾ ಶೆಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಅಭಿಮಾನಿ ಬಳಗವಿದ್ದು, ಅವರ ನಿರ್ಗಮನವು ಈಗಾಗಲೇ ಚರ್ಚೆಗೆ ಗ್ರಾಸವಾಗಿದೆ. ಕೆಲವು ಅಭಿಮಾನಿಗಳು, ಶೋ ತಂಡ ಪ್ರೇಕ್ಷಕರ ಭಾವನೆಗೆ ಧಕ್ಕೆಯುಂಟು ಮಾಡಿದೆ ಎಂದು ಟೀಕಿಸಿದ್ದಾರೆ.