ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚಿನ್ನಯ್ಯನ ಹೇಳಿಕೆ ದಾಖಲಿಸುವ ಕಾರ್ಯ ಇಂದು ಬೆಳ್ತಂಗಡಿ ಕೋರ್ಟ್‌ನಲ್ಲಿ ಪೂರ್ಣಗೊಂಡಿದೆ.
ಶಿವಮೊಗ್ಗ ಪೊಲೀಸರು ಸೆಪ್ಟೆಂಬರ್ 27ರ ಬೆಳಗ್ಗೆ ಚಿನ್ನಯ್ಯನನ್ನು ಕೋರ್ಟ್‌ಗೆ ಹಾಜರುಪಡಿಸಿದ್ದು, ಬೆಳಗ್ಗೆ 11:30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ ಊಟದ ಬಳಿಕ 2:45ರಿಂದ ಸಂಜೆ 4:30ರವರೆಗೆ ನ್ಯಾಯಾಧೀಶರ ಮುಂದೆ BNSS 183 ಅಡಿಯಲ್ಲಿ ಹೇಳಿಕೆ ನೀಡಲಾಗಿದೆ.
ಚಿನ್ನಯ್ಯ ಮೊದಲಿಗೆ ಸಾಕ್ಷಿಯಾಗಿ ಹಾಜರಾಗಿ ನಂತರ ಆರೋಪಿಯಾಗಿ ಎಸ್.ಐ.ಟಿ ಬಂಧನಕ್ಕೊಳಗಾಗಿದ್ದ. ಆತ ಪ್ರಾರಂಭದಲ್ಲಿ ನೀಡಿದ್ದ ಹೇಳಿಕೆಗೆ ಬದ್ಧನಾಗಿರದ ಕಾರಣ, ಹೊಸ ಹೇಳಿಕೆ ನೀಡಲು ಅವಕಾಶ ಕೋರಿ, ಕೋರ್ಟ್‌ನಲ್ಲಿ ದಿನಾಂಕ ನಿಗದಿಪಡಿಸಲಾಗಿತ್ತು.
ಸೆ.23ರಂದು ಪ್ರಾರಂಭವಾದ ಹೇಳಿಕೆ ಪ್ರಕ್ರಿಯೆ ಪೂರ್ಣಗೊಳ್ಳದೇ ಉಳಿದ ಕಾರಣ, ಸೆ.25 ಮತ್ತು ಇಂದು (ಸೆ.27) ತನಕ ಮೂರು ಹಂತಗಳಲ್ಲಿ ದಾಖಲು ನಡೆಯಿತು. ಈ ಮೂಲಕ ಚಿನ್ನಯ್ಯನ ಹೇಳಿಕೆ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಸಂಜೆ ವೇಳೆ ಆತನನ್ನು ಶಿವಮೊಗ್ಗ ಜೈಲಿಗೆ ಮರಳಿ ಕರೆದೊಯ್ಯಲಾಯಿತು.
ಇದೀಗ ಈ ಹೇಳಿಕೆ ದಾಖಲಾತಿಗಳು ಎಸ್.ಐ.ಟಿ ಅಧಿಕಾರಿಗಳ ವಶದಲ್ಲಿದ್ದು, ಅದರ ಆಧಾರದ ಮೇಲೆ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.