ಬೆಂಗಳೂರು: ರಾಜ್ಯದಲ್ಲಿ ತಾಯಂದಿರ ಮರಣ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ತಾಲೂಕು ಆಸ್ಪತ್ರೆ ಮತ್ತು ಹೆಚ್ಚು ಹೆರಿಗೆ ಆಗುವ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆಯೂ ತಜ್ಞ ವೈದ್ಯರು ಲಭ್ಯವಿರುವಂತೆ ಅವರ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈವರೆಗೆ ತಾಲೂಕು ಆಸ್ಪತ್ರೆಗಳಲ್ಲಿ ತಲಾ ಒಬ್ಬರು ಸ್ತ್ರೀ ರೋಗ ತಜ್ಞರು, ಅರಿವಳಿಕೆ ತಜ್ಞರು ಮತ್ತು ಮಕ್ಕಳ ತಜ್ಞ (ತ್ರಿವಳಿ ತಜ್ಞರು)ರು ಕಾರ್ಯನಿರ್ವಹಿಸುತ್ತಿದ್ದರು. ಈ ಪೈಕಿ ಒಬ್ಬರು ಲಭ್ಯವಿರದಿದ್ದರೂ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗುತ್ತಿತ್ತು. ಇದನ್ನು ತಪ್ಪಿಸಲು ಇನ್ನು ಮುಂದೆ ತಾಲೂಕು ಆಸ್ಪತ್ರೆ ಮತ್ತು ಹೆಚ್ಚು ಹೆರಿಗೆ ಆಗುವ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ ಇಬ್ಬರು ಸ್ತ್ರೀ ರೋಗ ತಜ್ಞರು, ಅರಿವಳಿಕೆ ತಜ್ಞರು ಮತ್ತು ಮಕ್ಕಳ ತಜ್ಞರು ಕಾರ್ಯನಿರ್ವಹಿಸಲಿದ್ದಾರೆ. ಈ ಬಗ್ಗೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಇನ್ನು ಮುಂದೆ ಎಲ್ಲ ತಾಲೂಕು ಆಸ್ಪತ್ರೆಗಳು ಸಿಇಎಂಒಎನ್‌ಸಿ (ಕ್ಲಿಷ್ಟಕರವಾದ ಹೆರಿಗೆ ಮತ್ತು ಸಿಸೇರಿಯನ್ ಶಸ್ತ್ರ ಚಿಕಿತ್ಸೆ ನಡೆಸುವ ಆಸ್ಪತ್ರೆಗಳು) ಆಸ್ಪತ್ರೆಗಳಾಗಿ ಕಾರ್ಯನಿರ್ವಹಿಸಲಿವೆ. ಜೊತೆಗೆ ತಿಂಗಳಿಗೆ ಸರಾಸರಿ 30 ಅಥವಾ ಅದಕ್ಕಿಂತ ಹೆಚ್ಚಿನ ಹೆರಿಗೆ ಹೊರೆಯನ್ನು ಹೊಂದಿರುವ 41 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ ಇಬ್ಬರಂತೆ ತ್ರಿವಳಿ ತಜ್ಞರು ಕಾರ್ಯನಿರ್ವಹಿಸಲಿದ್ದಾರೆ ಎಂದು ಆರೋಗ್ಯ ಸಚಿವರು ತಿಳಿಸಿದರು.
ಕಡಿಮೆ ಹೆರಿಗೆ ಆಗುತ್ತಿರುವ 230ಕ್ಕೂ ಹೆಚ್ಚು ಸಮುದಾಯ ಆರೋಗ್ಯ ಕೇಂದ್ರಗಳಿಂದ ತಜ್ಞರನ್ನು ತಾಲೂಕು ಆಸ್ಪತ್ರೆಗಳಿಗೆ ಮರು ನಿಯೋಜಿಸಲಾಗುವುದು. ಆದರೆ ಮಲೆ ಮಹದೇಶ್ವರ ಬೆಟ್ಟ, ಸಂತೇಮಾರಹಳ್ಳಿ, ತಲಕಾಡು, ಬನ್ನೂರು ಮುಂತಾದ ತಾಲೂಕು ಆಸ್ಪತ್ರೆಗ ಳಿಂದ ದೂರದ ಪ್ರದೇಶದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿರುವ ತ್ರಿವಳಿ ತಜ್ಞರನ್ನು ಅಲ್ಲೇ ಉಳಿಸಿಕೊಳ್ಳಲಾಗುವುದು. ಇನ್ನು 15 ದಿನದಲ್ಲಿ ನೇರ ನೇಮಕಾತಿಯ ಮೂಲಕ 220 ತಜ್ಞ ವೈದ್ಯರ ನೇಮಿಸಲಾಗುವುದು ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ತಾಯಂದಿರ ಮರಣ ಸಂಖ್ಯೆ ಲಕ್ಷಕ್ಕೆ 60 ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ತಾಯಂದಿರ ಮರಣ ಪ್ರಮಾಣ ಶೇ.25 ಕಡಿಮೆಯಾಗಿದೆ. ಆದರೆ ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲೇ ತಾಯಂದಿರ ಮರಣ ಪ್ರಮಾಣ ಹೆಚ್ಚಿದೆ.