‘ಐ ಲವ್ ಮುಹಮ್ಮದ್’ ಪೋಸ್ಟರ್‌ ವಿವಾದ: ಮುಂದುವರಿದ ಘರ್ಷಣೆ, ಪೊಲೀಸರಿಂದ ಲಾಠಿ ಪ್ರಹಾರ

ಬರೇಲಿ (ಉ.ಪ್ರ): ಶುಕ್ರವಾರದ ಪ್ರಾರ್ಥನೆಯ ನಂತರ ಬರೇಲಿಯಲ್ಲಿ ನಡೆದ ಪ್ರತಿಭಟನೆ ಗಲಾಟೆಗೆ ತಿರುಗಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ‘ಐ ಲವ್ ಮುಹಮ್ಮದ್’ ಪೋಸ್ಟರ್ ವಿವಾದಕ್ಕೆ ಸಂಬಂಧಿಸಿದಂತೆ ವಾರಗಳಿಂದ ಘರ್ಷಣೆ ಮುಂದುವರಿದಿದೆ.

ಸೆಪ್ಟೆಂಬರ್ 4ರಂದು ಕಾನ್ಪುರದಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ, ಧರ್ಮಗುರುವೊಬ್ಬರು ಜನತೆಗೆ ಧ್ವನಿ ಎತ್ತಲು ಹಾಗೂ ಜ್ಞಾಪಕ ಪತ್ರ ಸಲ್ಲಿಸಲು ಕರೆ ನೀಡಿದ್ದರು. ಅದರ ಭಾಗವಾಗಿ ಶುಕ್ರವಾರದ ಪ್ರಾರ್ಥನೆ ಬಳಿಕ ಇಸ್ಲಾಮಿಯಾ ಮೈದಾನದ ಬಳಿ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದರು.

ಪ್ರದೇಶದಲ್ಲಿ ಮುನ್ನೆಚ್ಚರಿಕೆಯಾಗಿ ಭಾರೀ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದರೂ, ಕೆಲವರು ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದ ಹಿನ್ನೆಲೆಯಲ್ಲಿ ಜನಸಮೂಹ ಹೆಚ್ಚಾಗಿ ಉದ್ವಿಗ್ನತೆ ಉಂಟಾಯಿತು. ಕೆಲವು ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆಂದು ವರದಿಯಾಗಿದೆ.

ಘಟನೆ ಬಳಿಕ ಪೊಲೀಸರು ಲಾಠಿ ಚಾರ್ಜ್ ನಡೆಸಿ ಜನರನ್ನು ಚದುರಿಸಿದರು. ಇದರಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!