ಫ್ರಾಂಕ್‌ಫರ್ಟ್/ಬೀಜಿಂಗ್: ಉತ್ಪಾದನಾ ವಲಯದಲ್ಲಿ ರೋಬೋಟ್‌ಗಳು ಮತ್ತು ಕೃತಕ ಬುದ್ಧಿಮತ್ತೆಯ (AI) ಬಳಕೆ ವೇಗವಾಗಿ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ, ಚೀನಾ ತನ್ನ ಕಾರ್ಖಾನೆ ರೋಬೋಟ್‌ಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡುವಲ್ಲಿ ದಾಖಲೆಯ ಸಾಧನೆ ಮಾಡಿದೆ. ಫ್ರಾಂಕ್‌ಫರ್ಟ್ ಮೂಲದ ಇಂಟರ್‌ನ್ಯಾಷನಲ್ ಫೆಡರೇಶನ್ ಆಫ್ ರೊಬೊಟಿಕ್ಸ್ (IFR) ನ ಇತ್ತೀಚಿನ ವರದಿ ಪ್ರಕಾರ, 2024ರಲ್ಲಿ ಚೀನಾದಲ್ಲಿ ಕೈಗಾಕೆಗಳಲ್ಲಿ ಬಳಸಲು ಸುಮಾರು 3 ಲಕ್ಷ ಹೊಸ ರೋಬೋಟ್‌ಗಳನ್ನು ತಯಾರಿಸಿದ್ದು, ಇದು ಪ್ರಪಂಚದ ಉಳಿದ ಭಾಗಗಳಿಗಿಂತ ಹೆಚ್ಚು.
ಚೀನಾದ ಕಾರ್ಖಾನೆಗಳಲ್ಲಿ ಈಗಾಗಲೇ 20 ಲಕ್ಷಕ್ಕಿಂತ ಹೆಚ್ಚು ರೋಬೋಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಈ ಸಂಖ್ಯೆ ಕಳೆದ ಮೂರು ವರ್ಷಗಳಲ್ಲಿ ದ್ವಿಗುಣಗೊಂಡಿದೆ. “ಚೀನಾದ ಉತ್ಪಾದನಾ ನೆಲೆಯ ಆಧುನೀಕರಣ ಕಾರ್ಯತಂತ್ರವು ನೂತನ ಮೈಲಿಗಲ್ಲನ್ನು ತಲುಪಿದೆ. 2021ರಲ್ಲಿ 10 ಲಕ್ಷ ಘಟಕಗಳನ್ನು ಮೀರಿದ್ದ ರೋಬೋಟ್‌ಗಳ ಬಳಕೆ, ಈಗ 20 ಲಕ್ಷ ಘಟಕಗಳ ಗಡಿ ದಾಟಿದೆ,” ಎಂದು ಐಎಫ್ಆರ್ ಅಧ್ಯಕ್ಷ ಟಕಾಯುಕಿ ಇಟೊ ಹೇಳಿದ್ದಾರೆ.
ಪ್ರಮುಖ ಸಂಗತಿ ಏನೆಂದರೆ, ಚೀನೀ ತಯಾರಕರು ಈಗ ವಿದೇಶಿ ಕಂಪನಿಗಳಿಗಿಂತ ಹೆಚ್ಚು ಘಟಕಗಳನ್ನು ಸ್ವದೇಶಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. 2023ರಲ್ಲಿ 47 ಶೇಕಡಾ ಮಾರುಕಟ್ಟೆ ಪಾಲು ಹೊಂದಿದ್ದ ಚೀನೀ ಕಂಪನಿಗಳು, 2024ರಲ್ಲಿ ಅದನ್ನು 57 ಶೇಕಡಾಕ್ಕೆ ಏರಿಸಿವೆ.
ಇತ್ತ ಭಾರತವು 7 ಶೇಕಡಾ ಬೆಳವಣಿಗೆಯನ್ನು ಸಾಧಿಸಿದ್ದು, ಆಟೋಮೋಟಿವ್ ವಲಯವು ಅತಿದೊಡ್ಡ ಜಾಲವಾಗಿ ಬೆಳೆಯುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಾರು ತಯಾರಿಕಾ ಕಂಪೆನಿಗಳು 45 ಶೇಕಡಾ ರೋಬೋಟ್‌ಗಳ ಬಳಕೆಯನ್ನು ಹೊಂದಿದ್ದು, ಭಾರತವು ವಾರ್ಷಿಕ ಸ್ಥಾಪನೆಗಳಲ್ಲಿ ಜರ್ಮನಿಯನ್ನು ಮೀರಿ ವಿಶ್ವದಲ್ಲಿ ಆರನೇ ಸ್ಥಾನವನ್ನು ಪಡೆದಿದೆ.
ಚೀನಾದಲ್ಲಿ ರೋಬೋಟಿಕ್ಸ್ ಮಾರುಕಟ್ಟೆ ಇನ್ನಷ್ಟು ವಿಸ್ತರಿಸಲು ಅವಕಾಶವಿದ್ದು, 2028ರವರೆಗೆ ಪ್ರತಿವರ್ಷ ಸರಾಸರಿ 10 ಶೇಕಡಾ ಬೆಳವಣಿಗೆಯನ್ನು ಸಾಧಿಸಲಿದೆ ಎಂದು ವರದಿ ಅಂದಾಜು ಮಾಡಿದೆ.
ಈ ನಡುವೆ, ಮಾನವನಂತೆ ಕಾರ್ಯನಿರ್ವಹಿಸುವ ಹುಮನಾಯ್ಡ್ ರೋಬೋಟ್‌ಗಳ ಅಭಿವೃದ್ಧಿಯಲ್ಲೂ ಚೀನಾ ಮುಂಚೂಣಿಯಲ್ಲಿದೆ. ಹ್ಯಾಂಗ್‌ಝೌ ಮೂಲದ ಸ್ಟಾರ್ಟ್-ಅಪ್ ಯುನಿಟ್ರೀ ರೊಬೊಟಿಕ್ಸ್ ಜುಲೈನಲ್ಲಿ ತನ್ನ ಹೊಸ R1 ರೋಬೋಟ್ ಅನ್ನು ಅನಾವರಣಗೊಳಿಸಿತು. 5 ಲಕ್ಷ ರೂ. (ಸುಮಾರು $6,000) ಬೆಲೆಯ ಈ ರೋಬೋಟ್ ಮುಷ್ಟಿ ಹೋರಾಟ, ಕಾರ್ಟ್‌ವೀಲ್ ಮಾಡುವ ಸಾಮರ್ಥ್ಯ ಹೊಂದಿದ್ದು, ಚಲನಶೀಲತೆ ಮತ್ತು ಸಮತೋಲನದಲ್ಲಿ ಚೀನಾದ ಪ್ರಗತಿಯನ್ನು ತೋರಿಸಿದೆ.
ಬೋಸ್ಟನ್ ಡೈನಾಮಿಕ್ಸ್ ಹಾಗೂ ಟೆಸ್ಲಾ ಆಪ್ಟಿಮಸ್ ಮುಂತಾದ ಅಮೇರಿಕಾದ ತಂತ್ರಜ್ಞಾನ ದೈತ್ಯ ಕಂಪನಿಗಳ ಹುಮನಾಯ್ಡ್ ರೋಬೋಟ್‌ಗಳಿಗೆ ಹೋಲಿಸಿದರೆ, ಯುನಿಟ್ರೀ ಉತ್ಪನ್ನಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುವುದರಿಂದ ಜಾಗತಿಕ ಮಾರುಕಟ್ಟೆಯನ್ನು ಬಿರುಗಾಳಿಯಂತೆ ತಲುಪುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.