ಕುಂದಾಪುರ: ತೆಂಗಿನ ತೋಟದಲ್ಲಿ ಕಾಯಿ ಕೊಯ್ದು ಸಾಗಾಟ ಮಾಡುವ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕನೋರ್ವ ಮಳೆಯಿಂದ ನೀರು ತುಂಬಿದ್ದ ತೋಡಿಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಬೇಳೂರು ಗ್ರಾಮದ ಚಾಮ್ತಾಡಿ ಕೈಲೇರಿ ಬಳಿ ಬುಧವಾರ ನಡೆದಿದೆ.
ಅಚ್ಲಾಡಿ ಅಂಬೇಡ್ಕರ್ ಕಾಲೋನಿಯ ನಿವಾಸಿ ಶರತ್ (32) ಮೃತ ವ್ಯಕ್ತಿ.
ಶರತ್ ಅವರು ಬುಧವಾರ ತಮ್ಮ ಮನೆಯ ಸಮೀಪದ ಅಚ್ಲಾಡಿಯಲ್ಲಿ ಗುತ್ತಿಗೆದಾರರೊಬ್ಬರೊಂದಿಗೆ ತೆಂಗಿನ ತೋಟದಲ್ಲಿ ಕೆಲಸಕ್ಕೆ ತೆರಳಿದ್ದರು. ಮರದಿಂದ ತೆಂಗು ಕೊಯ್ದು ಟೆಂಪೋಗೆ ತುಂಬಿಸುವ ಕಾರ್ಯದಲ್ಲಿ ತೊಡಗಿದ್ದಾಗ, ಅವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಬಳಿಕ ಎಲ್ಲೆಡೆ ಹುಡುಕಿದರೂ ಪತ್ತೆಯಾಗಿರಲಿಲ್ಲ. ಬುಧವಾರ ವಿಪರೀತ ಮಳೆ ಇದ್ದ ಕಾರಣ ತೋಡು ತುಂಬಿ ಹರಿಯುತ್ತಿತ್ತು. ಗುರುವಾರ ಮಧ್ಯಾಹ್ನ ಕೈಲೇರಿ ಸಮೀಪದ ತೋಡಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಬುಧವಾರ ಸುರಿದ ಭಾರಿ ಮಳೆಯಿಂದಾಗಿ ಹೊಳೆಯು ತುಂಬಿ ಹರಿಯುತ್ತಿತ್ತು. ಸುತ್ತಮುತ್ತಲ ರಸ್ತೆಗಳೂ ಕೂಡ ಕೆಸರಿನಿಂದ ತುಂಬಿ ಸಂಚರಿಸಲು ಅಸಾಧ್ಯ ಸ್ಥಿತಿ ಇತ್ತು. ಟೆಂಪೋಗೆ ತೆಂಗಿನಕಾಯಿಗಳನ್ನು ಸಾಗಿಸುವ ವೇಳೆ ಶರತ್ ಆಕಸ್ಮಿಕವಾಗಿ ಕಾಲು ಜಾರಿ, ಯಾರ ಗಮನಕ್ಕೂ ಬಾರದೆ ತೋಡಿಗೆ ಬಿದ್ದು, ಮುಳುಗಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ತೋಟವು ಹೊಳೆಯ ಪಕ್ಕದಲ್ಲೇ ಇದ್ದ ಕಾರಣ, ಬುಧವಾರ ತಡರಾತ್ರಿವರೆಗೂ ಹೊಳೆಯ ಬಳಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಗುರುವಾರವೂ ಶೋಧ ಮುಂದುವರೆಸಿ, ಅಂತಿಮವಾಗಿ ಮೃತದೇಹ ಪತ್ತೆಯಾಯಿತು. ಈಶ್ವರ್ ಮಲ್ಪೆ, ಅಗ್ನಿಶಾಮಕ ದಳದ ತಂಡ ಹಾಗೂ ಸ್ಥಳೀಯ ಸ್ವಯಂಸೇವಕರಾದ ನಾಗರಾಜ್ ಜೀವನ್ ಮಿತ್ರ ಸೇರಿದಂತೆ ಹಲವರು ಶೋಧ ಕಾರ್ಯಾಚರಣೆಯಲ್ಲಿ ನೆರವು ನೀಡಿದರು.
ಕೋಟಾ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರವೀಣ್ ಕುಮಾರ್, ಎಎಸ್‌ಐ ರವಿ ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರು ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಕೆಲವು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ಶರತ್, ಇತ್ತೀಚೆಗೆ ತಮ್ಮ ಸಹೋದರಿಯ ಮದುವೆ ಮಾಡಿಸಿದ್ದರು ಮತ್ತು ತಮ್ಮ ತಾಯಿಗೆ ಆಸರೆಯಾಗಿದ್ದ ಏಕೈಕ ವ್ಯಕ್ತಿಯಾಗಿದ್ದರು. ಅವರ ಅಕಾಲಿಕ ಮರಣವು ಕುಟುಂಬಕ್ಕೆ ತೀವ್ರ ದುಃಖ ಉಂಟುಮಾಡಿದೆ.