ನಟಿ ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕರ್‌ಗಳ ಸುಳಿವು ಪತ್ತೆ

ಬೆಂಗಳೂರು: ಡಿಜಿಟಲ್ ಅರೆಸ್ಟ್, ಮೊಬೈಲ್ ಹ್ಯಾಕಿಂಗ್ ಸೇರಿದಂತೆ ಆನ್‌ಲೈನ್ ಮೋಸಗಳಿಂದ ಜನರು ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ವಿದ್ಯಾವಂತರೇ ಇಂತಹ ಮೋಸಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ನಟಿ ಪ್ರಿಯಾಂಕಾ ಉಪೇಂದ್ರ ಅವರೇ ಇಂತಹ ಹ್ಯಾಕಿಂಗ್‌ಗೆ ಬಲಿಯಾಗಿದ್ದು, 1.65 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಘಟನೆ ಬಳಿಕ ಪ್ರಿಯಾಂಕಾ ಉಪೇಂದ್ರ ಮತ್ತು ನಟ ಉಪೇಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದರು. ಜೊತೆಗೆ, ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಘಟನೆ ಬಗ್ಗೆ ಮಾಧ್ಯಮಗಳ ಮುಂದೆ ವಿವರ ಹಂಚಿಕೊಂಡಿದ್ದರು.

ತನಿಖೆ ನಡೆಸಿದ ಬೆಂಗಳೂರು ಪೊಲೀಸರಿಗೆ ಇದೀಗ ಹ್ಯಾಕರ್‌ಗಳ ಸುಳಿವು ದೊರೆತಿದೆ. ಬಿಹಾರ ಮೂಲದ ಆರೋಪಿಗಳು ಪ್ರಿಯಾಂಕಾ ಅವರ ಮೊಬೈಲ್ ಸಂಖ್ಯೆಯನ್ನು ಹ್ಯಾಕ್ ಮಾಡಿರುವುದು ಪತ್ತೆಯಾಗಿದ್ದು, ಕದ್ದ ಹಣವನ್ನು ಮೊದಲಿಗೆ ನಾಲ್ಕು ನಕಲಿ ಬ್ಯಾಂಕ್ ಖಾತೆಗಳಿಗೆ ಮತ್ತು ನಂತರ ನಳಂದಾದ ಒಂದು ಖಾತೆಗೆ ವರ್ಗಾವಣೆ ಮಾಡಲಾಗಿದೆ.

ಪೊಲೀಸರು ಈಗಾಗಲೇ ಎಲ್ಲ ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಗ್ರಹಿಸಿದ್ದು, ಆರೋಪಿಗಳನ್ನು ಬಂಧಿಸಲು ಬಿಹಾರಕ್ಕೆ ವಿಶೇಷ ಪೊಲೀಸ್ ತಂಡವನ್ನು ಕಳುಹಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಡಿಸಿಪಿ ಅಕ್ಷಯ್ ಮಚೀಂದ್ರ ತಿಳಿಸಿದ್ದಾರೆ.

ಪೊಲೀಸರ ತನಿಖೆಯ ಪ್ರಕಾರ, 1219279295167# ಎಂಬ ಯುಎಸ್‌ಎಸ್‌ಡಿ ಕೋಡ್ ಬಳಸಿ ಹ್ಯಾಕಿಂಗ್ ಮಾಡಲಾಗಿದ್ದು, ಇದೇ ಮಾದರಿಯಲ್ಲಿ ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಹಲವು ಕಡೆ ಹ್ಯಾಕಿಂಗ್ ಪ್ರಯತ್ನ ನಡೆದಿದೆ.

ಮೋಸದ ವಿಧಾನ:
ಆರೋಪಿಗಳು “ಪಾರ್ಸಲ್ ಬಂದಿದೆ” ಎಂದು ಪ್ರಿಯಾಂಕಾ ಉಪೇಂದ್ರ ಅವರನ್ನು ನಂಬಿಸಿ, ಕೆಲವು ಸಂಖ್ಯೆಗಳ ಡಯಲ್ ಮಾಡಲು ಹೇಳಿಕೊಂಡಿದ್ದಾರೆ. ಆ ಮೂಲಕ ಮೊಬೈಲ್‌ನ ನಿಯಂತ್ರಣವನ್ನು ಪಡೆದುಕೊಂಡು, ಅವರ ಮಗ ಮತ್ತು ಸಂಬಂಧಿಗೆ ಮೆಸೇಜ್ ಮಾಡಿ ತಕ್ಷಣ ಹಣ ವರ್ಗಾವಣೆ ಮಾಡಲು ಒತ್ತಾಯಿಸಿದ್ದಾರೆ. ಇದರಂತೆ ಒಟ್ಟು 1.65 ಲಕ್ಷ ರೂಪಾಯಿ ವರ್ಗಾವಣೆಗೊಂಡಿದೆ.

ಆದರೆ ಪ್ರಿಯಾಂಕಾ ಉಪೇಂದ್ರ ಸಮಯಕ್ಕೆ ಎಚ್ಚರಗೊಂಡು ಖಾತೆ ಬ್ಲಾಕ್ ಮಾಡಿದ್ದರಿಂದ ದೊಡ್ಡ ನಷ್ಟ ತಪ್ಪಿತು. ಕೇವಲ ಹತ್ತು ನಿಮಿಷ ತಡವಾಗಿದ್ದರೆ 10 ಲಕ್ಷ ರೂಪಾಯಿ ನಷ್ಟವಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

error: Content is protected !!