ಟ್ರಂಪ್ ಸುಂಕದಿಂದ ಮಾಸ್ಕೋ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದ ನ್ಯಾಟೋ ಪ್ರಧಾನ ಕಾರ್ಯದರ್ಶಿ! ಮೋದಿ- ಪುಟಿನ್‌ ಮಾಡಿದ್ದೇನು?

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ರಷ್ಯಾ ತೈಲ ಖರೀದಿಗಾಗಿ ವಿಧಿಸಿರುವ ಸುಂಕಗಳಿಂದಾಗಿ ಮಾಸ್ಕೋ ಮೇಲೆ ʻದೊಡ್ಡ ಪರಿಣಾಮʼ ಬೀರುತ್ತಿವೆ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಹೇಳಿದ್ದಾರೆ.

ಟ್ರಂಪ್ ಭಾರತೀಯ ಸರಕುಗಳ ಮೇಲೆ ಸುಂಕಗಳನ್ನು ಘೋಷಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಉಕ್ರೇನ್ ಕುರಿತ ಕಾರ್ಯತಂತ್ರದ ವಿವರಣೆ ಕೇಳಿದ್ದಾರೆ ಎಂದು ಅವರು ಹೇಳಿದರು. “ಈ ಸುಂಕಗಳು ರಷ್ಯಾದ ಮೇಲೆ ತಕ್ಷಣ ಪರಿಣಾಮ ಬೀರುತ್ತವೆ ಏಕೆಂದರೆ ದೆಹಲಿ ಈಗ ಪುಟಿನ್ ಅವರೊಂದಿಗೆ ನೇರ ಸಂಪರ್ಕದಲ್ಲಿದೆ” ಎಂದು ರುಟ್ಟೆ CNN ಗೆ ತಿಳಿಸಿದರು.

ಟ್ರಂಪ್ ಕಳೆದ ತಿಂಗಳು ಭಾರತಕ್ಕೆ 25% ಪರಸ್ಪರ ಸುಂಕ ಮತ್ತು ರಷ್ಯಾ ತೈಲ ಖರೀದಿಗೆ ಹೆಚ್ಚುವರಿ 25% ದಂಡ ವಿಧಿಸಿದ್ದರು. ಅಧಿಕಾರಕ್ಕೆ ಮರಳಿದ ಬಳಿಕ ವಿವಿಧ ದೇಶಗಳ ಮೇಲೆ ಸುಂಕಗಳನ್ನು ವಿಧಿಸಿರುವ ಟ್ರಂಪ್, ನವದೆಹಲಿಯು ರಷ್ಯಾ ತೈಲ ಖರೀದಿ ಮೂಲಕ ಮಾಸ್ಕೋದ ಉಕ್ರೇನ್ ಮೇಲಿನ ದಾಳಿಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಸೆಪ್ಟೆಂಬರ್ 17ರಂದು ಪ್ರಧಾನಿ ಮೋದಿ ಮತ್ತು ಪುಟಿನ್ ದೂರವಾಣಿ ಮಾತುಕತೆಯಲ್ಲಿ ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರದ ಅಗತ್ಯವನ್ನು ಚರ್ಚಿಸಿದ್ದರು. ಇದೇ ವೇಳೆ, ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯ ಸಂದರ್ಭದಲ್ಲಿಯೂ ಇಬ್ಬರು ನಾಯಕರು ದೀರ್ಘ ಕಾಲ ಮಾತುಕತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

ಚೀನಾದ ಮೇಲೂ ಸುಂಕ ವಿಧಿಸುವಂತೆ ಟ್ರಂಪ್ ಒತ್ತಾಯ
NATO ದೇಶಗಳು ಚೀನಾದ ಮೇಲೆ 50 ರಿಂದ 100% ರಷ್ಟು ಸುಂಕ ವಿಧಿಸಬೇಕೆಂದು ಹಾಗೂ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಬೇಕೆಂದು ಟ್ರಂಪ್ ಆಗ್ರಹಿಸಿದ್ದಾರೆ. “ಕೆಲವು ರಾಷ್ಟ್ರಗಳು ಇನ್ನೂ ರಷ್ಯಾದ ತೈಲ ಖರೀದಿಸುತ್ತಿರುವುದು ಆಘಾತಕಾರಿ” ಎಂದು ಅವರು ಟೀಕಿಸಿದರು. NATO ದೇಶಗಳು ರಷ್ಯಾ ತೈಲ ಖರೀದಿಯನ್ನು ನಿಲ್ಲಿಸಬೇಕು ಎಂದು ರುಟ್ಟೆಯೂ ಸಹ ಬೆಂಬಲ ವ್ಯಕ್ತಪಡಿಸಿದರು.

ಭಾರತ–ಅಮೆರಿಕಾ ವ್ಯಾಪಾರ ಮಾತುಕತೆ
ಟ್ರಂಪ್ ಸುಂಕದ ಹಿನ್ನಲೆಯಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ನೇತೃತ್ವದ ಭಾರತೀಯ ನಿಯೋಗವು ಈ ವಾರ ನ್ಯೂಯಾರ್ಕ್‌ನಲ್ಲಿ ಅಮೆರಿಕಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿತು. ಭಾರತದ ಮುಖ್ಯ ಸಮಾಲೋಚಕ ರಾಜೇಶ್ ಅಗರ್ವಾಲ್ ಮತ್ತು ಅಮೆರಿಕದ ಸಮಾಲೋಚಕ ಬ್ರೆಂಡನ್ ಲಿಂಚ್ ಇತ್ತೀಚೆಗೆ ದೆಹಲಿಯಲ್ಲೂ ಚರ್ಚೆ ನಡೆಸಿದ್ದರು.

“ನಮ್ಮ ವ್ಯಾಪಾರ ಮಾತುಕತೆಗಳು ಭಾರತ–ಅಮೆರಿಕಾ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲಿವೆ. ಉಜ್ವಲ ಭವಿಷ್ಯಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ” ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಟ್ರಂಪ್ ಕೂಡ “ನನ್ನ ಸ್ನೇಹಿತ ಮೋದಿ ಜೊತೆ ಶೀಘ್ರದಲ್ಲೇ ಮಾತನಾಡಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.

error: Content is protected !!