ತಿರುವನಂತಪುರಂ: ಮುಂದಿನ ಎರಡು ದಿನಗಳವರೆಗೆ ಕೇರಳದಾದ್ಯಂತ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಭಾರತ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಹಲವು ಜಿಲ್ಲೆಗಳಲ್ಲಿ ಹಳದಿ ಎಚ್ಚರಿಕೆ ಘೋಷಿಸಲಾಗಿದ್ದು, 64.5 ಮಿ.ಮೀ.ರಿಂದ 115.5 ಮಿ.ಮೀ.ವರೆಗೆ ಮಳೆಯಾಗುವ ನಿರೀಕ್ಷೆಯಿದೆ. ಕೇರಳದ ಗಡಿ ಜಿಲ್ಲೆ ದಕ್ಷಿಣ ಕನ್ನಡದಲ್ಲೂ ಭಾರೀ ಮಳೆ, ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ತಿರುವನಂತಪುರಂ ಜಿಲ್ಲಾಧಿಕಾರಿ ಶುಕ್ರವಾರ ವೃತ್ತಿಪರ ಕಾಲೇಜುಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ. ಆದರೆ, ಮೊದಲೇ ನಿಗದಿಪಡಿಸಲಾಗಿರುವ ಸಾರ್ವಜನಿಕ ಪರೀಕ್ಷೆಗಳು ನಿಯೋಜಿತ ವೇಳಾಪಟ್ಟಿಯಂತೆ ನಡೆಯಲಿವೆ ಎಂದು ತಿಳಿಸಲಾಗಿದೆ.
ಬಂಗಾಳಕೊಲ್ಲಿಯಲ್ಲಿ ಹೊಸ ಕಡಿಮೆ ಒತ್ತಡದ ಪ್ರದೇಶ ರೂಪುಗೊಳ್ಳುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಪೆಸಿಫಿಕ್ ಮಹಾಸಾಗರದಲ್ಲಿ ಚಂಡಮಾರುತ ಚಟುವಟಿಕೆಗಳು ಬುಧವಾರ ರಾತ್ರಿ ಆರಂಭಗೊಂಡಿದ್ದು, ಇದರ ಪರಿಣಾಮವಾಗಿ ಕೇರಳದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಶುಕ್ರವಾರ ದಕ್ಷಿಣ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಈ ವ್ಯವಸ್ಥೆಯು ಕರಾವಳಿಯನ್ನು ಸಮೀಪಿಸುತ್ತಿದ್ದಂತೆ ರಾಜ್ಯದ ಉತ್ತರ ಭಾಗಗಳಲ್ಲಿಯೂ ತೀವ್ರ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಕೇರಳ, ಕರ್ನಾಟಕ ಮತ್ತು ಲಕ್ಷದ್ವೀಪ ಕರಾವಳಿಯಲ್ಲಿ, ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ, ಕೆಲವೆಡೆಗಳಲ್ಲಿ ಗಂಟೆಗೆ 60 ಕಿ.ಮೀ. ವೇಗದಲ್ಲಿ ಬಲವಾದ ಗಾಳಿಯ ಬೀಸುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಭಾರೀ ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲುವುದರಿಂದ ಸಂಚಾರ ಅಡಚಣೆ, ತಗ್ಗು ಪ್ರದೇಶಗಳಲ್ಲಿ ಪ್ರವಾಹ, ಮರಗಳು ಉರುಳುವುದು, ವಿದ್ಯುತ್ ಕಡಿತ ಮತ್ತು ಮನೆಗಳು ಹಾಗೂ ಗುಡಿಸಲುಗಳಿಗೆ ಹಾನಿ ಸಂಭವಿಸುವ ಸಾಧ್ಯತೆಗಳ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿದೆ. ಭೂಕುಸಿತಗಳು ಮತ್ತು ಕರಾವಳಿ ಅಪಾಯಗಳು ಸಹ ಮುಂದುವರಿಯುವ ಆತಂಕವಿದೆ.
ಅಧಿಕಾರಿಗಳು ಜನರನ್ನು ಅನಗತ್ಯ ಪ್ರಯಾಣ ತಪ್ಪಿಸಲು, ಸುರಕ್ಷಿತ ಸ್ಥಳಗಳಲ್ಲಿ ಉಳಿಯಲು ಹಾಗೂ ಸಂಚಾರ ಮತ್ತು ವಿಪತ್ತು ನಿರ್ವಹಣಾ ಕ್ರಮಗಳಲ್ಲಿ ಸಹಕರಿಸಲು ಕೋರಿದ್ದಾರೆ.