ಹನೂರು: ತಾಲೂಕಿನ ಕುರುಬರ ದೊಡ್ಡಿ ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಮೃತಪಟ್ಟ ಘಟನೆ ಇಂದು(ಸೆ.24) ನಡೆದಿದೆ.
ಕುರುಬರ ದೊಡ್ಡಿ ಗ್ರಾಮದ ಕುಮಾರ್ ಹಾಗೂ ಲಕ್ಷ್ಮಿ ದಂಪತಿಗಳ ಪುತ್ರರಾದ ಯೋಗೇಶ್ (9), ಸಂಜಯ್ (4) ಮೃತಪಟ್ಟ ಬಾಲಕರು.
ಮೃತ ಬಾಲಕರ ತಂದೆ ತಾಯಿ ಮೂಲತಃ ತಾಲೂಕಿನ ಕುರುಬರ ದೊಡ್ದಿ ಗ್ರಾಮದವರಾಗಿದ್ದು, ಹನೂರು ಪ.ಪಂ.ವ್ಯಾಪ್ತಿಯ ಆರ್.ಎಸ್.ದೊಡ್ಡಿಯಲ್ಲಿ ಮಕ್ಕಳೊಡನೆ ವಾಸವಾಗಿದ್ದರು. ಇಬ್ಬರು ಬಾಲಕರೂ ಕೂಡ ಆರ್.ಎಸ್.ದೊಡ್ಡಿಯ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ಶಾಲೆಗಳಿಗೆ ದಸರಾ ರಜೆಯಿದ್ದ ಕಾರಣ ಬಾಲಕರು ತಮ್ಮ ಸ್ವಗ್ರಾಮಕ್ಕೆ ತೆರಳಿದ್ದರು. ಬುಧವಾರ ಅದೇ ಗ್ರಾಮದ ಲಿಂಗಪ್ಪ ಎಂಬವರ ಜಮೀನಿಗೆ ತೆರಳಿರುವ ಬಾಲಕರು ಅಲ್ಲಿದ್ದ ಕೃಷಿ ಹೊಂಡದಲ್ಲಿ ಮೀನು ನೋಡಲು ಹೋಗಿದ್ದ ವೇಳೆ ಆಯಾ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ರಾಮಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ವಿಷಯ ತಿಳಿದ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಮಕ್ಕಳ ಮೃತ ದೇಹದ ಮುಂದೆ ಕುಳಿತು ರೋಧಿಸುತ್ತಿದ್ದ ದೃಶ್ಯ ನೆರೆದಿದ್ದವರ ಕಣ್ಣುಗಳನ್ನು ತೇವಗೊಳಿಸಿತ್ತು.