ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಿಸಿ ಪಿಡಬ್ಲ್ಯೂಡಿ ಎಡವಟ್ಟು- ಕೋರ್ಟ್ ತೀರ್ಪಿನಂತೆ ರಸ್ತೆ ತೆರವು: ಗಂಜಿಮಠ-ಮುಚ್ಚೂರು-ನೀರುಡೆ ರಸ್ತೆ ಬಂದ್

ಮಂಗಳೂರು: ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಿಸಿರುವ 12 ಸೆಂಟ್ಸ್‌ ಜಾಗವನ್ನು ಜಾಗದ ಮಾಲಕರಿಗೆ ಬಿಟ್ಟು ಕೊಡಬೇಕೆಂದು ಪಿಡಬ್ಲ್ಯುಡಿ ಇಲಾಖೆಯ ವಿರುದ್ಧ ನ್ಯಾಯಾಲಯ ತೀರ್ಪು ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ ಎಂದು ಜಾಗದ ಮಾಲಕರು ಆರೋಪಿಸಿ ರಸ್ತೆಯನ್ನು ಜೆಸಿಬಿ ಮೂಲಕ ಒತ್ತುವರಿ ಮಾಡಲು ಮುಂದಾದ ಘಟನೆ ಎಡಪದವು ಸಮೀಪದ ಮುಚ್ಚೂರು ವ್ಯಾಪ್ತಿಯ ಮಂಜನಕಟ್ಟೆ ಎಂಬಲ್ಲಿ ಇಂದು ಸಂಭವಿಸಿದೆ. ಇದರಿಂದಾಗಿ ಗಂಜಿಮಠ, ಕೊಂಪದವು, ಮುಚ್ಚೂರು ನಿಡ್ಡೋಡಿ ರಸ್ತೆ ಬಂದ್‌ ಆಗಿ ವಾಹನ ಸವಾರರು ಸಮಸ್ಯೆಗೆ ಸಿಲುಕುವಂತಾಯ್ತು.

ರಸ್ತೆ ಹಾದು ಹೋದ 12 ಸೆಂಟ್ಸ್‌ ಜಾಗ ಮಂಜನಕಟ್ಟೆಯ ಹೆನ್ರಿ ಅಲ್ಮೇಡಾ ಎಂಬವರಿಗೆ ಸೇರಿದ್ದು, ಪಿಡಬ್ಲ್ಯುಡಿ ಇಲಾಖೆಯವರು ಸರ್ಕಾರಿ ಜಾಗದ ಬದಲು ಅವರ ಸ್ವಂತ ಜಮೀನಿನಲ್ಲಿ ರಸ್ತೆ ನಿರ್ಮಿಸಿರುವುದೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣ.

ಜಾಗದ ಮಾಲಕ ಹೆನ್ರಿ ಅಲ್ಮೆಡಾ ಪ್ರಕಾರ, 2008ರಲ್ಲಿ ರಸ್ತೆ ಅಗಲ ಮಾಡುವ ಸಂದರ್ಭ ಹಲಸಿನ ಮರ, ಶೆಡ್‌ ತೆಗೆದಿದ್ದರು. ನಮ್ಮ ಮನೆಯವರನ್ನು ಹೆದರಿಸಿ ನಮ್ಮ ಜಾಗದಲ್ಲಿ ಪಿಡಬ್ಲ್ಯುಡಿ ಇಲಾಖೆಯವರು ರಸ್ತೆ ನಿರ್ಮಿಸಿದ್ದಾರೆ. ನೆರೆಹೊರೆಯವರು ಜಾಗ ಮಾರುವಾಗ ನಮ್ಮ ಮರಗಳನ್ನು ತೆಗೆದಿದ್ದರ ವಿರುದ್ಧ ಪಿಡಬ್ಲ್ಯುಡಿ ಇಂಜಿನಿಯರ್ಸ್‌ಗೆ ದೂರು ನೀಡಿದ್ದೆನು. ಪರಿಶೀಲಿಸುವಾಗ ರಸ್ತೆ ನಿರ್ಮಾಣವಾದ ಜಾಗ ಪಬ್ಲಿಕ್‌ನಲ್ಲಿ ಇರದೆ, ನಮ್ಮ ಸ್ವಂತ ಜಾಗದಲ್ಲಿ ಇದೆ ಎನ್ನುವುದು ಗೊತ್ತಾಯಿತು. ಈ ರಸ್ತೆಯಲ್ಲಿ ನಮ್ಮ 12 ಸೆಂಟ್ಸ್‌, ಮೇಲ್ಭಾಗದಲ್ಲಿ 2 ಸೆಂಟ್ಸ್‌ ಸೇರಿ 14 ಸೆಂಟ್ಸ್‌ ಜಾಗವಿದೆ ಎಂದಿದ್ದಾರೆ.


ಹೀಗಾಗಿ ನಾವು ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಆಗ ಕೋರ್ಟ್‌ ಪರಿಹಾರವಾಗಿ ಬದಲಿ ಜಾಗ ಒದಗಿಸುವಂತೆ ತೀರ್ಪು ನೀಡಿತ್ತು. ಆಗ ಪಿಡಬ್ಲುಡಿ ಇಂಜಿನಿರ್ಯ್ಸ್‌ ಆಗಮಿಸಿ, ಪಬ್ಲಿಕ್‌ ಜಾಗದಿಂದ 12 ಸೆಂಟ್ಸ್‌ ಕೊಡಲು ಸಾಧ್ಯವಿಲ್ಲ, 10 ಸೆಂಟ್ಸ್‌ ಜಾಗ ಕೊಡುತ್ತೇವೆ, ರಸ್ತೆಗೆ ಹಾನಿ ಮಾಡಬೇಡಿ ಎಂದು ತಿಳಿಸಿದ್ದರು. ನಾನು ಇದಕ್ಕೆ ಒಪ್ಪಿದ್ದೆ. 2018ರಲ್ಲಿ ಆ ಹತ್ತು ಸೆಂಟ್ಸ್‌ ಜಾಗಕ್ಕಾಗಿ ಪಿಡಬ್ಲ್ಯುಡಿ ಇಂಜಿನಿಯರ್ಸ್‌ ಕಚೇರಿಯಿಂದ ಕಚೇರಿಗೆ ನನ್ನನ್ನು ಸಾಕಷ್ಟು ಅಲೆದಾಡಿಸಿ, ಸತಾಯಿಸಿದ್ದಾರೆ. ಇದನ್ನು ನಮ್ಮ ವಕೀಲರಲ್ಲಿ ಹೇಳಿದಾಗ ಕೋರ್ಟ್‌ ಆರ್ಡರ್‌ ಉಂಟಲ್ವಾ ರಸ್ತೆ ಅಗೆದು ತೆಗೆಯಿರಿ ಎಂದಿದ್ದರು. ಆದರೂ ನಾನು ಸಾರ್ವಜನಿಕರಿಗೆ ಉಪದ್ರ ಆಗುವುದು ಬೇಡ ಎಂದು ಮಾತಾಡಿ ಪರಿಹಾರ ಕೊಡಲಿ ಎಂದು ಇಲ್ಲಿಯವರೆಗೆ ಸಹನೆಯಿಂದ ಕಾದಿದ್ದೇನೆ. ಅಧಿಕಾರಿಗಳು ನಮ್ಮ ಬಗ್ಗೆ ಮಾನವೀಯತೆ ತೋರಲಿಲ್ಲ. ರಸ್ತೆಗೆ ಹೋದ 12 ಸೆಂಟ್ಸ್‌ ಜಾಗಕ್ಕೆ ಬದಲಾಗಿ ಪಕ್ಕದಲ್ಲೇ ಇರುವ ಸರ್ಕಾರಿ ಜಾಗದ 10 ಸೆಂಟ್ಸ್‌ ಜಾಗವನ್ನು ನಮ್ಮ ಹೆಸರಿಗೆ ಮಾಡಿಸಿಕೊಡಬೇಕು ಇಲ್ಲವಾದರೆ ನ್ಯಾಯಾಲಯದ ತೀರ್ಪಿನಂತೆ ನಮ್ಮ ಜಾಗವನ್ನು ನಾವು ಒತ್ತುವರಿ ಮಾಡುತ್ತೇವೆ ಎಂದಿದ್ದಾರೆ.

ಹೀಗಾಗಿ ಇಂದು ಅವರು ನ್ಯಾಯಾಲಯದ ಆದೇಶದಂತೆ ಪೊಲೀಸ್‌ ಸಂರಕ್ಷಣೆಯಲ್ಲಿ ನ್ಯಾಯಾಲಯದ ಸಿಬ್ಬಂದಿಯ ಸಮ್ಮುಖದಲ್ಲೇ ತಮ್ಮ ನಿವೇಶನದ ಗಡಿ ಗುರುತಿಸಿ ಅಗೆಯುವ ಕಾರ್ಯಕ್ಕೆ ಮುಂದಾಗಿ ಜೆಸಿಬಿಯನ್ನು ರಸ್ತೆ ಮಧ್ಯೆ ಇಡಲಾಯಿತು. ಇದರಿಂದ ವಾಹನ ಸಂಚಾರ ಸ್ತಬ್ದಗೊಂಡಿತು..

ಆದರೆ ಪಿಡಬ್ಲ್ಯುಡಿ ಇಂಜಿನಿಯರ್‌ಗಳು ಬರಬೇಕೆಂದು ಹೆನ್ರಿ ಅಲ್ಮೇಡ ಪಟ್ಟು ಹಿಡಿದರೂ ಗಂಟೆಗಳ ಕಾಲ ಯಾವೊಬ್ಬ ಅಧಿಕಾರಿಯೂ ಬರಲಿಲ್ಲ. ತಹಶೀಲ್ದಾರ್‌ಗೆ ಕರೆ ಮಾಡಿದಾಗ ಕೋರ್ಟ್‌ ಆರ್ಡರ್‌ ಆಗಿದ್ದರೆ ರಸ್ತೆ ಅಗೆಯಿರಿ ಎಂದು ವಕೀಲರಲ್ಲಿ ಫೋನಿನಲ್ಲಿ ಹೇಳುವುದನ್ನು ಕೇಳಿಸಿಕೊಂಡ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಅಗೆದು ಸಾರ್ವಜನಿಕರಿಗೆ ತೊಂದರೆ ಕೊಡಲು ನಮಗೂ ಇಷ್ಟವಿಲ್ಲ, ನಮಗೆ 10 ಸೆಂಟ್ಸ್‌ ಜಾಗವನ್ನು ಕೊಡುವುದಾಗಿ ಬರಹ ರೂಪದಲ್ಲಿ ಬರೆದು ಕೊಡಬೇಕು. ಹೆದ್ದಾರಿ ಇಲಾಖೆಯ ಇಂಜಿನಿಯರ್ಸ್‌ಗಳು ಸ್ಥಳಕ್ಕೆ ಬರಬೇಕು ಎಂದು ಹೆನ್ರಿ ಕುಟುಂಬಿಕರು ಪಟ್ಟು ಹಿಡಿದರು. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಬಂದು ಮಾತುಕತೆ ನಡೆಸಿದರೂ ಯಾವುದೇ ಫಲ ಸಿಗಲಿಲ್ಲ. ಕೊನೆಗೆ ಪಿಡಡಬ್ಲ್ಯೂಡಿ ಇಂಜಿನಿಯರ್ಸ್‌ ಸ್ಥಳಕ್ಕಾಗಮಿಸಿ ಮನವೊಲಿಸಿ ಜಿಲ್ಲಾಧಿಕಾರಿಯ ಸಮ್ಮುಖದಲ್ಲಿ ಜಾಗವನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು.

ಹೀಗಾಗಿ ಡಿಸಿ ಕಚೇರಿಗೆ ತೆರಳಿದ್ದು, ಆದರೆ ಅಲ್ಲಿ ಜಿಲ್ಲಾಧಿಕಾರಿ ಇರಲಿಲ್ಲ. ಹೀಗಾಗಿ ಡಿಸಿಗಿಂತ ಕೆಳದರ್ಜೆಯ ಅಧಿಕಾರಿಗಳು ಮಾತುಕತೆ ನಡೆಸಿ, ತಕ್ಷಣ ಪರಿಹಾರ ಸಾಧ್ಯವಿಲ್ಲ, ಕಡತಗಳನ್ನು ಪರೀಶೀಲಿಸಬೇಕೆಂದು ಹೇಳಿದ್ದಾರೆ. ಹೀಗಾಗಿ ಮಾತುಕತೆ ಮುರಿದುಬಿದ್ದಿದ್ದು, ಸಂಜೆ ವೇಳೆ ಮತ್ತೆ ಜೆಸಿಬಿ ಮೂಲಕ ತಮ್ಮ ಜಾಗದ ಒತ್ತುವರಿಗೆ ಮುಂದಾದರು.

ರಸ್ತೆ ತೆರವಾದರೆ ಗಂಜಿಮಠದಿಂದ ಮುಚ್ಚೂರು, ಕೊಂಪದವರು, ನಿಡ್ಡೋಡಿ, ನೀರುಡೆ, ಕಟೀಲು ರಸ್ತೆ ಸಂಚಾರ ಬಂದ್‌ ಆಗಲಿದೆ.

ವಕೀಲ ಪ್ರಜ್ವಲ್‌ ಡಿಸೋಜಾ ಹೇಳಿದ್ದೇನು?
ಸರ್ವೆ ನಂಬರ್‌ 174/3ಬಿ ಜಾಗದಲ್ಲಿ ಪಿಡಬ್ಲ್ಯುಡಿ ರಾಜ್ಯ ರಸ್ತೆ ನಿರ್ಮಿಸಿದ್ದು ನಿಜವಾಗಿ ಇದು 174/4ರಲ್ಲಿ ಮಾಡಬೇಕಿತ್ತು. ಜಾಗದ ಮಾಲಕರಿಗೆ ಯಾವುದೇ ಪರಿಹಾರ ಕೊಡಲಿಲ್ಲ. ಉಪಾಯವಿಲ್ಲದೆ 2014 ಕರ್ನಾಟಕ ಸರ್ಕಾರ, ಡೆಪ್ಯುಟಿ ಕಮೀಷನರ್.‌ ತಹಶೀಲ್ದಾರ್‌, ಪಿಡಬ್ಲ್ಯುಡಿ ಡಿಪಾರ್ಟ್‌ಮೆಂಟ್‌ ವಿರುದ್ಧ ಪ್ರಕರಣ ದಾಖಲಿಸಿದ್ದೆವು. ಕೋರ್ಟ್‌ನಲ್ಲಿ ಜಾಗವನ್ನು ಬಿಟ್ಟುಕೊಡಬೇಕೆಂದು ಆರ್ಡರ್‌ ಆಗುತ್ತದೆ. ಆಗ ಇಲಾಖೆ ನಿಮ್ಮ ಜಾಗಕ್ಕೆ ಬದಲಾಗಿ 10 ಸೆಂಟ್ಸ್‌ ಜಾಗವನ್ನು ಕೊಡುವುದಾಗಿ ಹೇಳಿದಾಗ ನಮ್ಮ ಕಕ್ಷಿಧಾರರು ಒಪ್ಪಿದ್ದರು. ಆದರೆ 2014ರಿಂದ ಇಲ್ಲಿಯವರೆಗೆ 10 ವರ್ಷದಿಂದ ಯಾವ ಪರಿಹಾರನೂ ಸಿಕ್ಕಿಲ್ಲ, ಬದಲಿ ಜಾಗನೂ ಸಿಕ್ಕಿಲ್ಲ. ಹಾಗಾಗಿ ಪುನಃ ಕೋರ್ಟ್‌ಗೆ ಹೋಗಿದ್ದು, ಕಳೆದ ಜೂನಿನಲ್ಲಿಯೇ ಜಾಗವನ್ನು ತೆಗೆಯಲು ಆರ್ಡರ್‌ ಮಾಡಿದಾಗ ರಸ್ತೆ ಬಂದ್‌ ಮಾಲು ಮುಂದಾಗಿದ್ದೆವು. ಆದರೆ ಇನ್ನಾದರೂ ಪರಿಹಾರ ಸಿಗಬಹುದೆಂದು ಮತ್ತೊಮ್ಮೆ ಅವಕಾಶ ನೀಡಿದರೂ ಪಿಡಬ್ಲ್ಯುಡಿ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಕೊನೆಗೆ ನ್ಯಾಯಾಲಯದ ಮುಖಾಂತರ ಪೊಲೀಸ್‌ ರಕ್ಷಣೆಯಲ್ಲಿ ರಸ್ತೆಯನ್ನು ಒತ್ತುವರಿ ಮಾಡಲು ಬಂದಿದ್ದಾಗಿ ತಿಳಿಸಿದ್ದಾರೆ.

error: Content is protected !!