ನಾನು ಗಾಯತ್ರಿಯನ್ನು ಮತಾಂತರ ಮಾಡಿಲ್ಲ, ಮಾಡುವುದೂ ಇಲ್ಲ; ನಾನು ಕನ್ನಡಿಗ, ನಾನೂ ಹಿಂದೂ : ಮುಕಳೆಪ್ಪ

ಧಾರವಾಡ: ಯೂಟ್ಯೂಬ್‌ ಕಾಮಿಡಿಯನ್‌ ಖ್ವಾಜಾ ಶಿರಹಟ್ಟಿ ಉರ್ಫ್‌ ಮುಕಳೆಪ್ಪ “ನಾನು ಗಾಯತ್ರಿ ಜಾಲಿಹಾಳಳನ್ನು ಮತಾಂತರ ಮಾಡಿಲ್ಲ, ಮಾಡುವುದೂ ಇಲ್ಲ. ನಾನು ಕನ್ನಡಿಗ, ನಾನೂ ಹಿಂದೂ” ಎಂದು ಸಾಮಾಜಿಕ ತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ವಿವಾಹಕ್ಕೆ ಗಾಯತ್ರಿ ಪೋಷಕರು ಮತ್ತು ಹಿಂದೂ ಪರ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಠಾಣೆ ಮತ್ತು ಕೋರ್ಟ್ ಮೆಟ್ಟಿಲೇರಿದ ಬಳಿಕ ಇಬ್ಬರೂ ಜತೆಯಾಗಿ ಕಾರಿನಲ್ಲಿ ಕುಳಿತು ವಿಡಿಯೋ ಬಿಡುಗಡೆ ಮಾಡಿ ಕೈಮುಗಿದು ಬೇಡಿಕೊಂಡಿದ್ದಾರೆ.

ನಾನು ಗಾಯತ್ರಿಯನ್ನು ಲವ್ ಜಿಹಾದ್ ಮಾಡಿಲ್ಲ. ಆಕೆ ಯಾವ ಧರ್ಮದಲ್ಲಿ ಹುಟ್ಟಿದ್ದಾಳೋ ಅದೇ ಧರ್ಮದಲ್ಲಿ ಮುಂದುವರಿಯಲಿದ್ದಾಳೆ. ಇಬ್ಬರೂ ಪರಸ್ಪರ ಒಪ್ಪಿಕೊಂಡು ಮದುವೆಯಾಗಿದ್ದೇವೆ. ಕಲಾವಿದರಿಗೆ ಜಾತಿ ಧರ್ಮ ಇಲ್ಲ. ದಯವಿಟ್ಟು ನಮ್ಮನ್ನು ಬದುಕಲು ಬಿಡಿ ಎಂದು ಕೈಮುಗಿದು ವಿನಂತಿಸಿಕೊಂಡಿದ್ದಾರೆ. ಗಾಯತ್ರಿ ಕೂಡ ಅದೇ ರೀತಿ ವಿನಂತಿ ಮಾಡಿಕೊಂಡಿದ್ದಾರೆ.

ಗಾಯತ್ರಿ ಜಾಲಿಹಾಳ ಧಾರವಾಡದ ನಗರದ ಜೆಎಂಎಫ್‌ ನ್ಯಾಯಾಲಯದ ಎದುರು ಹೇಳಿಕೆಯನ್ನೂ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಪೊಲೀಸರು ವಿಚಾರಣೆ ಮಾಡಿದ ಬಳಿಕ ಸೋಮವಾರ ತಡರಾತ್ರಿ ಗಾಯತ್ರಿಯನ್ನು ಇಲ್ಲಿನ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆತರಲಾಗಿತ್ತು. ಈ ಮಧ್ಯೆ ಭೇಟಿ ಮಾಡಲು ಬಂದ ಪೋಷಕರ ಜತೆ ಮಾತನಾಡಲು ಗಾಯತ್ರಿ ನಿರಾಕರಿಸಿದ್ದು, ಪೊಲೀಸ್‌ ಬಂದೋಬಸ್ತ್ ನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಈ ವೇಳೆ ನ್ಯಾಯಾಧೀಶರ ಎದುರು ಹೇಳಿಕೆ ದಾಖಲಿಸಿರುವ ಗಾಯತ್ರಿ, ಸ್ವ ಇಚ್ಛೆಯಿಂದ ಖ್ವಾಜಾನನ್ನು ಮದುವೆಯಾಗಿದ್ದೇನೆ. ನನ್ನ ಗಂಡ ಯಾರಿಗೂ ಜೀವ ಬೆದರಿಕೆ ಹಾಕಿಲ್ಲ. ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಮದುವೆ ನಂತರವೂ ನಾನು ಹಾಗೂ ನನ್ನ ಗಂಡ ನಮ್ಮ ತಂದೆ, ತಾಯಿ ಜತೆ ಅನ್ಯೋನ್ಯವಾಗಿ ಇದ್ದೆವು. ನನ್ನ ತವರುಮನೆಯವರಿಗೆ ಮದುವೆ ನಂತರವೂ ದುಡ್ಡು ಹಾಕಿದ್ದೇನೆ. ನನ್ನ ಗಂಡ ಮತ್ತು ನನಗೆ ಜೀವ ಬೆದರಿಕೆ ಇದೆ. ನಮಗೆ ರಕ್ಷಣೆ ಕೊಡಿ ಎಂದು ಮನವಿ ಮಾಡಿದ್ದಾಳೆ. ನಂತರ ಪೊಲೀಸರು ಆಕೆಯನ್ನು ಮರಳಿ ಸಾಂತ್ವನ ಕೇಂದ್ರಕ್ಕೆ ತಂದುಬಿಟ್ಟಿದ್ದಾರೆ. ಇನ್ನು ಬೆಳಗ್ಗೆ ಮಗಳನ್ನು ಭೇಟಿ ಮಾಡಲು ತಾಯಿ ಶಿವಕ್ಕ, ತಂದೆ ಯಲ್ಲಪ್ಪ ಸೇರಿ ಕುಟುಂಬ ಸದಸ್ಯರು ಕೇಂದ್ರಕ್ಕೆ ಬಂದಿದ್ದು, ಗಾಯತ್ರಿ ಸರಿಯಾಗಿ ಮಾತನಾಡದೇ ವಾಪಸ್‌ ಕಳುಹಿಸಿದ್ದಾಳೆ.

ಈ ವೇಳೆ ಮಾಧ್ಯಮಗಳ ಎದುರು ಅಳಲು ತೋಡಿಕೊಂಡ ತಾಯಿ ಶಿವಕ್ಕ, ಮೊದಲಿನ ರೀತಿ ನನ್ನ ಮಗಳು ನನ್ನ ಜತೆ ಮಾತನಾಡಲಿಲ್ಲ. ಮುಕಳೆಪ್ಪ ಪೂರ್ತಿ ಆಕೆಯ ತಲೆ ಕೆಡಿಸಿದ್ದಾನೆ. ಆಕೆ ಅವನ ಜತೆಯೇ ಹೋಗುತ್ತೇನೆ ಎಂದು ನಿಂತಿದ್ದಾಳೆ. ಅವಳ ತಲೆ ಸರಿ ಹೋಗುವವರೆಗೂ ನಾವು ಆಕೆಯ ಬೆನ್ನು ಹತ್ತುತ್ತೇವೆ. ನಾವು ಕಣ್ಣೀರು ಹಾಕಿದರೂ ಆಕೆ ನಮ್ಮೊಂದಿಗೆ ಬರುತ್ತಿಲ್ಲ. ನಮಗೆ ಯಾರೂ ಹೆದರಿಸಿಲ್ಲ. ಯಾರ ಮಾತನ್ನೂ ಕೇಳಿ ನಾವು ದೂರು ದಾಖಲಿಸಿಲ್ಲ. ಮುಕಳೆಪ್ಪ ನಮಗೆ ಮೋಸ ಮಾಡಿದ್ದಾನೆ ಎಂದು ಕಣ್ಣೀರು ಹಾಕಿದ್ದಾರೆ.

ಗಾಯತ್ರಿಯ ತಲೆ ಕೆಡಿಸಲಾಗಿದ್ದು, ಆಕೆ ಸರಿ ಹೋಗಬೇಕು. ನಮ್ಮ ಮಗಳು ನಮ್ಮ ಮನೆಗೆ ವಾಪಸ್‌ ಬರಬೇಕು. ನಮಗೆಲ್ಲ ಆಕೆಯೇ ಬುದ್ಧಿವಾದ ಹೇಳುತ್ತಿದ್ದು. ಈಗ ಆಕೆಯೇ ಈ ರೀತಿಯ ಕೆಲಸ ಮಾಡಿದ್ದಾಳೆ. ನನ್ನ ಮಗಳು ಈಗಲೂ ಎಲ್ಲವನ್ನೂ ಬಿಟ್ಟು ಮನೆಗೆ ಬಂದರೆ ಕರೆದುಕೊಂಡು ಬೇರೆ ಮದುವೆ ಮಾಡುತ್ತೇನೆ ಎಂದು ತಂದೆ ಯಲ್ಲಪ್ಪ ಜಾಲಿಹಾಳ ಪ್ರತಿಕ್ರಿಯಿಸಿದ್ದಾರೆ.

error: Content is protected !!