“ಗುರುತಿನ ಚೀಟಿ ಇಲ್ಲದೆ ಸ್ಕ್ಯಾನಿಂಗ್ ಮಾಡಿದರೆ ಕಠಿಣ ಕ್ರಮ”- ಜಿಲ್ಲಾ ಆರೋಗ್ಯಾಧಿಕಾರಿ

ಮಂಗಳೂರು: ಸ್ಕ್ಯಾನಿಂಗ್ ಸೆಂಟರ್‌ಗಳು ರೋಗಿಗಳಿಂದ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಪಡೆದು ನಂತರವೇ ಸ್ಕ್ಯಾನ್ ಮಾಡಬೇಕು, ಇಲ್ಲದಿದ್ದರೆ ಅಂತಹ ಕೇಂದ್ರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಡಾ. ಎಚ್ ಆರ್ ತಿಮ್ಮಯ್ಯ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ(ಸೆ.23) ನಡೆದ ಪ್ರಸವಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ತಂತ್ರ (ನಿರ್ಬಂಧ ಕಾಯ್ದೆ), 1994 ರ ಕುರಿತ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, “ಗುರುತಿನ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಅಧಿಕಾರಿಗಳು ಸ್ಕ್ಯಾನಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಾರೆ. ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿನ ವರದಿಗಳಿಗೆ ಸಿಬ್ಬಂದಿ ಸದಸ್ಯರಿಂದ ಸಹಿ ಮಾಡಿಸದೇ, ಆಯಾ ತಜ್ಞ ವೈದ್ಯರಿಂದ ಮಾತ್ರ ಸಹಿ ಮಾಡಿಸಬೇಕು” ಎಂದು ಹೇಳಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ 189 ಸ್ಕ್ಯಾನಿಂಗ್ ಸೆಂಟರ್‌ಗಳಿವೆ. ಅದರಲ್ಲಿ 12 ಸರ್ಕಾರಿ ಸ್ವಾಮ್ಯದ ಮತ್ತು 177 ಖಾಸಗಿ ಕೇಂದ್ರಗಳಿವೆ. ವಿಶೇಷ ತಪಾಸಣಾ ತಂಡವನ್ನು ರಚಿಸಲಾಗಿದ್ದು, 2025 ರ ಏಪ್ರಿಲ್‌ನಿಂದ ಆಗಸ್ಟ್ ವರೆಗೆ 274 ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳು ಮತ್ತು 15 ಸರ್ಕಾರಿ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಗಿದೆ.

ಸಭೆಯಲ್ಲಿ, 2024-25ರ ವರ್ಷದಲ್ಲಿ ಜಿಲ್ಲೆಯಲ್ಲಿ 12,540 ಗಂಡು ಮತ್ತು 11,758 ಹೆಣ್ಣು ಮಕ್ಕಳ ಜನನವಾಗಿದ್ದು, ಲಿಂಗ ಅನುಪಾತ 938 ಇದೆ ಎಂದು ಮಾಹಿತಿ ನೀಡಲಾಯಿತು.

error: Content is protected !!