‘ದೇವಿ ಚಾಮುಂಡಿಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ’: ದಸರಾ ಉದ್ಘಾಟಿಸಿದ ಬಾನು ಮುಸ್ತಾಕ್

ಮೈಸೂರು: ಅಘೋಷಿತ ನಿಷೇಧಾಜ್ಞೆಯಂತೆಯೇ ಕಟ್ಟುನಿಟ್ಟಿನ ಪೊಲೀಸರ ಭದ್ರತೆಯ ನಡುವೆ ಸೋಮವಾರ ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ದಸರಾ ಉತ್ಸವದ ಘನ ಉದ್ಘಾಟನೆ ನಡೆಯಿತು. ಈ ಬಾರಿ ಉತ್ಸವವು ಕೋಮು ಸೌಹಾರ್ದ, ಧಾರ್ಮಿಕ ಸಹಿಷ್ಣತೆ ಮತ್ತು ಭಾಷಾ ಸಾಮರಸ್ಯದ ಸಂದೇಶವನ್ನು ಮತ್ತೊಮ್ಮೆ ಒತ್ತಿ ಹೇಳಿತು. ‘ಜೈ ಹಿಂದ್’, ‘ಜೈ ಕರ್ನಾಟಕ’ ಘೋಷಣೆಗಳ ಜೊತೆಗೆ ‘ಜೈ ಸಂವಿಧಾನ’ ಘೋಷಣೆ ಕೂಡ ಮೊಳಗಿದುದು ಗಮನಾರ್ಹ.

ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ನಾಡದೇವಿ ಚಾಮುಂಡೇಶ್ವರಿಗೆ ದೀಪ ಬೆಳಗಿ, ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ನವರಾತ್ರಿಯ ಮೊದಲ ದಿನದ ಬಣ್ಣವಾದ ಹಳದಿ ಸೀರೆಯನ್ನು ಧರಿಸಿದ್ದ ಅವರು, ತಮ್ಮ ಭಾಷಣದಲ್ಲಿ ಸಾಮರಸ್ಯ, ಸೌಹಾರ್ದ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಪಾದಿಸಿದರು.

‘ದೇವಿ ಚಾಮುಂಡಿಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ’ ಎಂದು ಮಾತು ಆರಂಭಿಸಿದ‌ ಬಾನು ಮುಷ್ತಾಕ್,, ‘ಸರ್ವ ಜನಾಂಗದ ತೋಟವಾದ ನಾಡಿನಲ್ಲಿ ಪ್ರತಿ ಹೂ ತನ್ನ‌ ಬಣ್ಣದಲ್ಲೆ ಅರಳಲಿ, ತನ್ನ ಸುವಾಸನೆಯನ್ನೇ ಬೀರಲಿ, ಪ್ರತಿ ಹಕ್ಕಿ ತನ್ನ ರಾಗದಲ್ಲೇ ಹಾಡಲಿ. ಆದರೆ ಎಲ್ಲವೂ ಒಟ್ಟಾದಾಗ ಸೌಹಾರ್ದದ ಹಾಡಾಗಲಿ’ ಎಂದು ಆಶಿಸಿದರು.

“ನಾವೆಲ್ಲರೂ ಒಂದೇ ಗಗನದ ಅಡಿಯ ಪಯಣಿಕರು. ಮನುಷ್ಯನೇ ಗಡಿಗಳನ್ನು ಸೃಷ್ಟಿಸುತ್ತಾನೆ” ಎಂದು ವಿಷಾದ ವ್ಯಕ್ತಪಡಿಸಿದ ಅವರು, ಜಯಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆಗಳನ್ನು ಉಲ್ಲೇಖಿಸಿ ಸೌಹಾರ್ದ ಸಂದೇಶ ಹರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, “ದಸರೆಯಂಥ ಉತ್ಸವದಲ್ಲಿ ರಾಜಕಾರಣ ಬೇಡ. ಬಾನು ಮುಷ್ತಾಕ್ ಅವರ ಆಯ್ಕೆ ಸರಿಯಾಗಿದೆ” ಎಂದು ಸ್ಪಷ್ಟಪಡಿಸಿದರು. ವಿರೋಧ ವ್ಯಕ್ತಪಡಿಸಿದವರ ಕುರಿತು, “ಸಂವಿಧಾನದ ವಿರುದ್ಧ ಓಲೈಕೆ ರಾಜಕಾರಣ ಅಕ್ಷಮ್ಯ” ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಸಹ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿದಾರರಿಗೆ ಸಂವಿಧಾನದ ಪ್ರಸ್ತಾವನೆ ಓದುವಂತೆ ಹೇಳಿದ್ದನ್ನು ನೆನಪಿಸಿ, “ರಾಜ್ಯ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಸಂವಿಧಾನದ ಪರವಾಗಿದೆ” ಎಂದರು. ಶಾಸಕರಾದ ಜಿ.ಟಿ. ದೇವೇಗೌಡ ಹಾಗೂ ಇತರರೂ ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಸಮರ್ಥಿಸಿದರು.

ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ಆಡಳಿತಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು, ವಿವಿಧ ಮಂಡಳಿಗಳ ಅಧ್ಯಕ್ಷರು ಹಾಗೂ ಗಣ್ಯರು ಪಾಲ್ಗೊಂಡಿದ್ದರು. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.

ಪೊಲೀಸರ ಅಸಾಮಾನ್ಯ ಭದ್ರತೆ

ಈ ಬಾರಿ ದಸರಾ ಉದ್ಘಾಟನೆಗೆ ಮೈಸೂರಿನಲ್ಲಿ ಹಿಂದೆಂದೂ ಕಾಣದ ಮಟ್ಟದ ಪೊಲೀಸರ ಭದ್ರತೆ ಏರ್ಪಡಿಸಲಾಗಿತ್ತು. ಚಾಮುಂಡಿ ಬೆಟ್ಟಕ್ಕೆ ಹೋಗುವ ಎಲ್ಲ ರಸ್ತೆಗಳಲ್ಲೂ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು. ಗುಂಪು ಸೇರುವ ಅವಕಾಶ ನೀಡದೆ, ಪಾಸ್ ಹೊಂದಿದ್ದವರಿಗೂ ಮೂರಂತಸ್ತಿನ ತಪಾಸಣೆ ನಡೆಸಲಾಯಿತು. ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ನಿಗದಿತ ದಳಗಳನ್ನು ನಿಯೋಜಿಸಲಾಗಿತ್ತು.

ಬಾನು ಮುಷ್ತಾಕ್ ಹಾಗೂ ಅವರ ಕುಟುಂಬಸ್ಥರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದ್ದು, ಕಠಿಣ ರಕ್ಷಣಾ ವಲಯದಲ್ಲಿ ಅವರನ್ನು ವೇದಿಕೆಗೆ ಕರೆತಂದರು.

error: Content is protected !!