ಹೈದರಾಬಾದ್: ಸೀನಿಯರ್ ವಿದ್ಯಾರ್ಥಿಗಳು ಮದ್ಯದ ಬಿಲ್ ಪಾವತಿಸುವಂತೆ ಒತ್ತಡ ಹೇರಿ, ಥಳಿಸಿ ರ‍್ಯಾಗಿಂಗ್ ಮಾಡಿರುವುದರಿಂದ ಮನನೊಂದ ವಿದ್ಯಾರ್ಥಿಯೊಬ್ಬ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್‌ನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೆಳಕಿಗೆ ಬಂದಿದೆ. ಹೈದರಾಬಾದ್‌ನಲ್ಲಿ ರ‍್ಯಾಗಿಂಗ್ ಪ್ರಕರಣಗಳು ತೀವ್ರವಾಗಿ ಹೆಚ್ಚಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳ ಕಳವಳಕ್ಕೆ ಕಾರಣವಾಗಿದೆ..
ಸಿದ್ಧಾರ್ಥ್ ಎಂಜಿನಿಯರಿಂಗ್ ಕಾಲೇಜಿನ 22 ವರ್ಷದ ವಿದ್ಯಾರ್ಥಿ ಜಾದವ್ ಸಾಯಿ ತೇಜ ಕಾಲೇಜು ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿದ್ಯಾರ್ಥಿಯ ಕೊನೆಯ ವೀಡಿಯೊದಲ್ಲಿ ಅವರು ಭಯ ವ್ಯಕ್ತಪಡಿಸಿದ್ದು, ತಮ್ಮನ್ನು ಹೊಡೆದು, ಹಣಕ್ಕಾಗಿ ಬಲವಂತ ಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. “ಅವರು ನನ್ನನ್ನು ಹೊಡೆಯುತ್ತಿದ್ದಾರೆ, ಹಣ ಕೇಳುತ್ತಿದ್ದಾರೆ, ನನಗೆ ಭಯವಾಗುತ್ತಿದೆ. ನಾನು ಏನು ಮಾಡಬೇಕು? ದಯವಿಟ್ಟು ನನ್ನನ್ನು ಉಳಿಸಿ” ಎಂದು ಸಾಯಿ ತೇಜ ಅಳಲು ವ್ಯಕ್ತಪಡಿಸಿದ್ದಾರೆ.
ಮಾಹಿತಿಯ ಪ್ರಕಾರ, ಹಿರಿಯ ವಿದ್ಯಾರ್ಥಿಗಳು ಸಾಯಿ ತೇಜ ಅವರನ್ನು ಬಾರ್‌ಗೆ ಕರೆದೊಯ್ದು, ಸುಮಾರು ₹10,000 ಬಿಲ್ ಪಾವತಿಸಲು ಒತ್ತಾಯ ಮಾಡಿದ್ದರು. ಈ ಒತ್ತಡ ಹಾಗೂ ಹಿಂಸಾಚಾರವನ್ನು ತಾಳಲಾಗದೆ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದು ವಕೀಲ ಕಿಶೋರ್ ಆರೋಪಿಸಿದ್ದಾರೆ.
ರಾತ್ರಿಯಿಡೀ 300 ಕಿ.ಮೀ ಪ್ರಯಾಣಿಸಿದ ನಂತರ, ಸಾಯಿ ತೇಜ ಅವರ ಕುಟುಂಬ ಹಾಗೂ ವಕೀಲ ಕಿಶೋರ್ ಹಾಸ್ಟೆಲ್ ತಲುಪಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ರ‍್ಯಾಗಿಂಗ್ ಹಾಗೂ ಆತ್ಮಹತ್ಯೆ ಎರಡರ ಕುರಿತು ತನಿಖೆ ಆರಂಭಿಸಿದ್ದಾರೆ.