ಹಗರಣದ ಕಳಂಕ ತೊಳೆಯಲು ಬಿಳಿಯಾರು ಧೂಮಾವತಿ ಸನ್ನಿಧಿಯಲ್ಲಿ ತಿಮ್ಮಾಪುರ ಶರಣು!?

ಉಡುಪಿ: ರಾಜಕೀಯದಲ್ಲಿ ಆಪತ್ತು ಬಂದಾಗ ಮನುಷ್ಯನಿಗೆ ನೆನಪಾಗುವುದು ಎರಡೇ—ಒಂದು ಕುರ್ಚಿ, ಇನ್ನೊಂದು ದೇವರು! ಅಬಕಾರಿ ಇಲಾಖೆಯ ಹಗರಣದ ಆರೋಪ ವಿಧಾನಸಭೆಯ ಅಧಿವೇಶನದಲ್ಲಿ ಬಾಂಬ್‌ನಂತೆ ಸಿಡಿದು, ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ವಿಪಕ್ಷಗಳು ಕತ್ತಿ ಮಸೆಯುತ್ತಿವೆ. ಇತ್ತ ಬೆಂಗಳೂರಿನಲ್ಲಿ ಉಸಿರು ಕಟ್ಟಿಸುವ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಸಚಿವರು ಸೀದಾ ಬಂದು ಇಳಿದಿದ್ದು ಉಡುಪಿಯ ಕಾಪು ತಾಲೂಕಿನ ಬಿಳಿಯಾರು ಗ್ರಾಮಕ್ಕೆ!

ಇಲ್ಲಿ ಅಸಲಿ ಟ್ವಿಸ್ಟ್ ಇರೋದೇ ಆಪ್ತ ಜೀವನ ಶೆಟ್ಟಿ ವಿಷಯದಲ್ಲಿ. ಅಬಕಾರಿ ಹಗರಣದ ಆಡಿಯೋ ಲೀಕ್ ಆದಾಗ ಇಡೀ ಕರ್ನಾಟಕ ಬೆಚ್ಚಿಬಿದ್ದಿತ್ತು. ಆ ಆಡಿಯೋದಲ್ಲಿ ಸಚಿವರ ಹೆಸರೇಳಿಕೊಂಡು ಜೀವನ ಶೆಟ್ಟಿ ಕಿರುಕುಳ ನೀಡುತ್ತಾರೆ ಎಂಬ ಆರೋಪ ಕೇಳಿಬಂದಿತ್ತು. ಈಗ ಅದೇ ಧಾರವಾಡದ ವೈನ್ ಮರ್ಚೆಂಟ್ ಅಸೋಸಿಯೇಷನ್ ಮುಖಂಡ ಜೀವನ ಶೆಟ್ಟಿ ಕರೆದಿದ್ದಾರೆ ಅಂತ ಸಚಿವರು ಸೀದಾ ದೈವದ ಸನ್ನಿಧಾನಕ್ಕೆ ಬಂದಿದ್ದಾರೆ ಎನ್ನುವುದು ಇಲ್ಲಿರುವ ವಿಶೇಷ!

ನೇಮದ ಸಂಭ್ರಮದ ನಡುವೆಯೇ ಸಚಿವರು ಪತ್ನಿ ಸಮೇತ ಧೂಮಾವತಿ ದೈವದ ಮುಂದೆ ಕೈಮುಗಿದು ನಿಂತಿದ್ದಾರೆ. ಹಗರಣದ ಕಳಂಕ ತೊಳೆಯಲು ಬಂದರೋ ಅಥವಾ ವಿರೋಧಿಗಳ ಬಾಯಿ ಮುಚ್ಚಿಸಲು ದೈವಕ್ಕೆ ಶರಣಾದರೋ ಗೊತ್ತಿಲ್ಲ. ಆದರೆ, ಹಗರಣದ ಕೇಂದ್ರಬಿಂದುವಾಗಿರುವ ವ್ಯಕ್ತಿಯ ಜೊತೆಗೇ ದೈವಸ್ಥಾನದ ಗೋಪುರ ಉದ್ಘಾಟಿಸಿದ್ದು ಮಾತ್ರ ಜನರ ಹುಬ್ಬೇರಿಸುವಂತೆ ಮಾಡಿದೆ. ದೈವದ ಎದುರು ನಿಂತು “ಬಿಜೆಪಿಯವರ ಆರೋಪವೆಲ್ಲ ಸುಳ್ಳು” ಎಂದು ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ.

error: Content is protected !!