ಸ್ವಂತ ಸೊಸೆಯನ್ನೇ ಶಿಕಾರಿಗೆ ಇಟ್ಟವರ ಅಟ್ಟಹಾಸಕ್ಕೆ ಬಲಿಯಾಯಿತು ಮುಗ್ಧ ಜೀವ!

ಬೀದರ್: ಇದು ಬಸವಕಲ್ಯಾಣದ ಮಣ್ಣಿನಲ್ಲಿ ನಡೆದ ರಕ್ತಸಿಕ್ತ ಕತೆ. ಅಂಜನಾಬಾಯಿ ಎಂಬ 22 ವರ್ಷದ ಕುಸುಮವೊಂದು ಕಮರಿ ಹೋಗಿದೆ. ಮದುವೆಯಾಗಿ ಮೂರೇ ವರ್ಷಕ್ಕೆ ಆಕೆ ನೇಣಿನ ಕುಣಿಕೆಗೆ ತಲೆ ಒಡ್ಡಿದ್ದಾಳೆ ಅಂದರೆ, ಆಕೆ ಅನುಭವಿಸಿದ ನರಕಯಾತನೆ ಎಂತಹದ್ದು ಇರಬೇಡ? ಇಲ್ಲಿರುವುದು ಬರೀ ವರದಕ್ಷಿಣೆ ಕಿರುಕುಳವಲ್ಲ, ಇದಕ್ಕಿಂತಲೂ ಹಸಿಬಿಸಿಯಾದ, ಅಸಹ್ಯ ಹುಟ್ಟಿಸುವ ಅಸಲಿ ‌ʻಸೈತಾನ’ನ ಮುಖಗಳು!

ವೇಶ್ಯಾವಾಟಿಕೆಗೆ ತಳ್ಳಿದ ಅತ್ತೆಯ ಅಟ್ಟಹಾಸ!
ಒಬ್ಬ ಅತ್ತೆ ಅಂದ್ರೆ ಅಮ್ಮನ ಸ್ಥಾನದಲ್ಲಿ ಇರಬೇಕು ಅಂತಾರಲ್ಲ, ಆದರೆ ಈ ಅರುಣಾಬಾಯಿ ಎಂಬಾಕೆ ಸೈತಾನನ ಅವತಾರ. ಸೊಸೆ ಅಂಜನಾಬಾಯಿಯನ್ನು ಮನೆಯ ಬೆಳಗುವ ದೀಪ ಅಂತ ನೋಡುವ ಬದಲು, ಹಣ ತರುವ ಯಂತ್ರ ಅಂತ ನೋಡಿದ್ದಳು. ಕೇವಲ ಹಣಕ್ಕಾಗಿ ತನ್ನ ಮನೆಯ ಸೊಸೆಯನ್ನೇ ವೇಶ್ಯಾವಾಟಿಕೆಗೆ ಇಳಿಯುವಂತೆ ಪೀಡಿಸುತ್ತಿದ್ದಳು ಅಂದರೆ ಈಕೆಯ ಎದೆ ಒಳಗೆ ಇರುವುದು ಹೃದಯವೋ ಅಥವಾ ಕಲ್ಲೋ? ಇಡೀ ಸಮಾಜ ತಲೆತಗ್ಗಿಸುವಂತಹ ಮಾತುಗಳನ್ನು ಆಡುತ್ತಾ, ಆ ಮುಗ್ಧ ಹೆಣ್ಣಿನ ಮಾನಸಿಕ ಸ್ಥಿತಿಯನ್ನು ಹೈರಾಣಾಗಿಸಿದ್ದಳು ಈ ʻಮಾಯಾಂಗನಿ’ ಅರುಣಾಬಾಯಿ.

ಗಂಡ ಶೇಖರ್ ಎಂಬ ‘ಕೈಲಾಗದ’ ಪಾಪಿ!
ಇನ್ನು ಗಂಡ ಶೇಖರ್ ಪಾಟೀಲ್. ಹೆಂಡತಿಯನ್ನು ಕಾಪಾಡಬೇಕಾದವನು ತಾಯಿ ಮತ್ತು ತಂದೆಯ ಜೊತೆ ಸೇರಿಕೊಂಡು ಸೊಸೆಯ ಮೇಲೆ ಸವಾರಿ ಮಾಡ್ತಿದ್ದ. ಮನೆಯೊಳಗೆ ತನ್ನ ಹೆಂಡತಿಯನ್ನು ಸೀರೆ ಎಳೆದು ಬೀದಿಗೆ ಹಾಕುವ ಹುನ್ನಾರ ನಡೆಯುತ್ತಿದ್ದರೂ ಈತ ಮೌನವಾಗಿದ್ದ ಅಂದರೆ ಈತನ ನರಗಳಲ್ಲಿ ಹರಿಯುತ್ತಿರುವುದು ಮನುಷ್ಯನ ರಕ್ತನಾ ಅಥವಾ ಚರಂಡಿ ನೀರಾ? ಮಾವ ಚಂದ್ರಕಾಂತ ಕೂಡ ಈ ಪಾಪದ ಕೂಪದ ಸಮಪಾಲುದಾರ. ಈ ಮೂವರ ಕಿರುಕುಳಕ್ಕೆ ಬೇಸತ್ತ ಅಂಜನಾಬಾಯಿ, ಬದುಕುವುದಕ್ಕಿಂತ ಸಾಯುವುದೇ ಮೇಲು ಅಂತ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಕೊರಳೊಡ್ಡಿದ್ದಾಳೆ.

ತಂದೆಯ ಒಡಲ ಕಿಚ್ಚು…
ಮಗಳನ್ನು ಚೆನ್ನಾಗಿ ಬದುಕಲಿ ಅಂತ ಆ ಮನೆಗೆ ಕಳುಹಿಸಿಕೊಟ್ಟ ತಂದೆ ವಿಜಯ್ ಕುಮಾರ್ ಇವತ್ತು ಸ್ಮಶಾನದಲ್ಲಿ ನಿಂತಿದ್ದಾರೆ. “ನನ್ನ ಮಗಳಿಗೆ ವೇಶ್ಯಾವಾಟಿಕೆ ಮಾಡುವಂತೆ ಪೀಡಿಸುತ್ತಿದ್ದರು” ಅಂತ ಅವರು ದೂರು ನೀಡುವಾಗ ಅವರ ಕಣ್ಣೀರು ಬೀದರ್ ಜಿಲ್ಲೆಯ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಈಗಾಗಲೇ ಶೇಖರ್ ಸೇರಿದಂತೆ ಆ ಮೂವರು ಕಿರಾತಕರು ಕಂಬಿ ಎಣಿಸುತ್ತಿದ್ದಾರೆ.

error: Content is protected !!