ಬೆಂಗಳೂರು: ಬೆಂಗಳೂರು ನಗರ ಹಾಗೂ ರಾಜ್ಯದ ಕಾನೂನು ಸುವ್ಯವಸ್ಥೆ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪೊಲೀಸ್ ಅಧಿಕಾರಿಗಳ ಜೊತೆ ಶುಕ್ರವಾರ(ಸೆ.19) ಮಹತ್ವದ ಸಭೆ ನಡೆಸಿರುವ , ಡ್ರಗ್ಸ್ ದಂಧೆಕೋರರ ಜತೆಗೆ ನಂಟು ಹೊಂದಿದ ಆರೋಪ ಎದುರಿಸುತ್ತಿರುವ 11 ಪೊಲೀಸ್ ಸಿಬ್ಬಂದಿ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.
ಸಭೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಪರಮೇಶ್ವರ್ , ಡ್ರಗ್ಸ್ ದಂಧೆಯ ಜೊತೆ ನಂಟು ಹೊಂದಿದ್ದ ಇನ್‌ಸ್ಪೆಕ್ಟರ್ ಸೇರಿ 11 ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ತಕ್ಷಣ ಇಲಾಖಾ ವಿಚಾರಣೆ ನಡೆಸಿ, ಸರ್ಕಾರಕ್ಕೆ ವರದಿ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಡೆಯುವ ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ ಡಿಸಿಪಿ ಹಾಗೂ ಇನ್ ಸ್ಪೆಕ್ಟರ್‌ಗಳನ್ನು ಹೊಣೆಯಾಗಿಸುತ್ತೇವೆ. ಈ ವಿಚಾರದಲ್ಲಿ ಇನ್ನು ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಸಮಯ ಮುಗಿದಿದೆ, ಇನ್ನೇನಿದ್ದರೂ ಕ್ರಮ ಮಾತ್ರ. ಯಾರ ಮೇಲೆ ಎಷ್ಟು ನೋಟೀಸ್ ಕೊಟ್ಟಿದ್ದೀರಿ, ಎಷ್ಟು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ವರದಿ ಕೊಟ್ಟಿದ್ದೀರಿ ಎಂದು ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸಿದ್ದೇನೆ ಎಂದರು.