ಬೆಂಗಳೂರು: ಮದ್ಯದ ಅಮಲಿನಲ್ಲಿ ಅಪರಿಚಿತ ಕಿಡಿಗೇಡಿಗಳು ಕ್ಯಾಬ್ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸಕೋಟೆ ನಿವಾಸಿ ಮೌನೇಶ್(24) ಹಲ್ಲೆಗೊಳಗಾದ ಕ್ಯಾಬ್ ಚಾಲಕ.
ಈ ಸಂಬಂಧ ಆತ ನೀಡಿರುವ ದೂರಿನ ಮೇರೆಗೆ ಬಾಣಸವಾಡಿ ಠಾಣೆ ಪೊಲೀಸರು ಅಪರಿಚಿತ ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಸೆ.15ರಂದು ರಾತ್ರಿ 11.30ರ ಸುಮಾರಿಗೆ ಸತ್ಯನಗರದ ಎಸ್‌ಎಂವಿಟಿ ರೈಲ್ವೆ ನಿಲ್ದಾಣ ಮುಂಭಾಗ ಕಾರಿನಲ್ಲಿ ಮೌನೇಶ್ ಮಲಗಿದ್ದರು. ಆಗ ಸ್ಥಳಕ್ಕೆ ಬಂದ ನಾಲ್ಕು ಮಂದಿ ಅಪರಿಚಿತರು ಕಾರಿನ ಬಾಗಿಲು ತಟ್ಟಿದ್ದಾರೆ. ಕಾರಿನ ಬಾಗಿಲು ಗ್ಲಾಸ್ ಇಳಿಸುತ್ತಿದ್ದಂತೆ ಕೆಲವರು ಮೌನೇಶ್‌ನನ್ನು ಹೊರಗಡೆ ಎಳೆದು ಏಕಾಏಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪರಿಣಾಮ ಮೌನೇಶ್ ಕುತ್ತಿಗೆ, ಮುಖ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಾಥಮಿಕ ತನಿಖೆ ಯಲ್ಲಿ ರೈಲು ನಿಲ್ದಾಣದ ಬಳಿ ಗ್ರಾಹಕರನ್ನು ಕರೆದೊಯ್ಯುವ ವಿಚಾರಕ್ಕೆ ಕ್ಯಾಬ್ ಚಾಲಕರ ನಡುವೆಯೇ ಮದ್ಯದ ಅಮಲಿನಲ್ಲಿ ಗಲಾಟೆ ನಡೆದಿದೆ ಎಂಬುದು ಗೊತ್ತಾಗಿದೆ. ಹಲ್ಲೆ ವಿಡಿಯೋ ಆಧರಿಸಿ ಆರೋಪಿಗಳನ್ನು ಗುರುತಿಸಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.