ಬೆಂಗಳೂರು: ಜಾತಿ ಸಮೀಕ್ಷೆ ಮುಂದೂಡಿಕೆಯಾಗುತ್ತದೆ ಎಂದೆಲ್ಲಾ ಊಹಾಪೂಹಗಳು ಹರಿದಾಡಿದ್ದವು. ಜಾತಿ ಸಮೀಕ್ಷೆಯನ್ನು ಮುಂದೂಡುವಂತೆ ಸ್ವತಃ ಕಾಂಗ್ರೆಸ್ ಪಕ್ಷದ ಮುಖಂಡರೇ ಆಗ್ರಹಿಸಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಉತ್ತರ ನೀಡಿ ಎಲ್ಲರ ಗೊಂದಲವನ್ನು ನಿವಾರಿಸಿದ್ದಾರೆ.
ಜಾತಿ ಸಮೀಕ್ಷೆಯನ್ನು ಮುಂದೂಡುವುದಿಲ್ಲ, ಬಿಜೆಪಿಯವರು ರಾಜಕೀಯವಾಗಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಹಿಂದೂಗಳ ವಿರುದ್ಧವಾಗಿದೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಾತಿಗಣತಿ ಸಂಬಂಧ ಸಚಿವರ ಒತ್ತಡಗಳಿಗೆ ಮಣಿಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಸೆ. 22ರಿಂದ ಕೆಲ ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಸಮೀಕ್ಷೆ ಮುಂದುವರಿಸಲು ಸೂಚನೆ ನೀಡಿದ್ದೇನೆ ಎಂದಿದ್ದಾರೆ.
ಗೊಂದಲದ ಅಂಶಗಳಿಗೆ ಬ್ರೇಕ್ ಹಾಕಿ ಸಮೀಕ್ಷೆ ಮುಂದುವರಿಸುವಂತೆ ಸೂಚಿಸಿದ್ದೇನೆ ಎಂದಿದ್ದಾರೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದಲ್ಲಿ ಈ ನಿಟ್ಟಿನಲ್ಲಿ ಚರ್ಚೆ ನಡೆಸಲು ಹೈವೋಲ್ಟೇಟ್ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಹಿರಿಯ ಸಚಿವರು ಭಾಗವಹಿಸಿದ್ದರು.