ಮಂಗಳೂರು: ಮಂಗಳೂರು ನಗರ ಪೊಲೀಸರು Karavali_tigers ಎಂಬ ಇನ್‌ಸ್ಟಾಗ್ರಾಮ್ ಪೇಜ್ ಮೂಲಕ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆರೋಪದಲ್ಲಿ ಯುವಕನೋರ್ವನನ್ನು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಾಲವಂತಿಗೆಯ ಕಿಲ್ಲೂರು ನಿವಾಸಿ ಬಂಧಿತನನ್ನು ಮೊಹಮ್ಮದ್ ಕೈಫ್(22) ಬಂಧಿತ ಆರೋಪಿ.
ಪ್ರಕರಣದ ಹಿನ್ನೆಲೆ: 2025ರ ಜುಲೈ 19ರಂದು Karavali_tigers ಪೇಜ್‌ನಲ್ಲಿ ಪ್ರಚೋದನಕಾರಿ ಸಂದೇಶ ಹರಡಿದ ಹಿನ್ನೆಲೆಯಲ್ಲಿ ಮಂಗಳೂರು ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐಟಿ ಕಾಯ್ದೆಯ ಕಲಂ 66(ಸಿ) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಕಲಂ 56, 353(1), 192 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.
ತನಿಖೆಯ ವೇಳೆ ಆರೋಪಿತನು ತಮಿಳುನಾಡಿನಲ್ಲಿ ಅಡಗಿದ್ದಾನೆಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಸಿ.ಇ.ಎನ್. ತಂಡವು ಆ ರಾಜ್ಯಕ್ಕೆ ತೆರಳಿ ಅವನನ್ನು ವಶಕ್ಕೆ ಪಡೆದು ಮಂಗಳೂರಿಗೆ ತಂದಿದೆ. ಬಳಿಕ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Karavali_tigers ಪೇಜ್ ವಿರುದ್ಧ ಮಂಗಳೂರು ನಗರದ ಬಜ್ಪೆ ಪೊಲೀಸ್ ಠಾಣೆಯಲ್ಲಿಯೂ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಈ ಬಗ್ಗೆ ಹೇಳಿಕೆ ನೀಡಿ, ಆರೋಪಿ ನಿರಂತರವಾಗಿ ತನ್ನ ಐಡಿಗಳನ್ನು ಬದಲಾಯಿಸುತ್ತಿದ್ದ, ಅಲ್ಲದೆ ಮಧ್ಯವರ್ತಿಗಳಿಂದ ಮಾಹಿತಿ ಹಂಚಿಕೆಯಲ್ಲಿ ತಡವಾಗಿತ್ತು. ಆದರೂ ಸಿಇಎನ್ ಪೊಲೀಸರು ಸಾಕಷ್ಟು ಶ್ರಮವಹಿಸಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಯಾವುದೇ ಪ್ರಕರಣವಾದರೂ ಸರಿ, ಕೊಂಚ ವಿಳಂಬವಾದರೂ ಪೊಲೀಸರು ಪ್ರತಿಯೊಬ್ಬ ಆರೋಪಿಗಳನ್ನು ಬಂಧಿಸದೆ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.