ಮಂಗಳೂರು: ನಕಲಿ ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರಗಳನ್ನು ಸೃಷ್ಟಿಸಿ ಜನರನ್ನು ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಗುರುಪುರ ಉಳಾಯಿಬೆಟ್ಟು ನಿವಾಸಿ ಮುಹಮ್ಮದ್ ಅಲಿ ಬಂಧಿತ ಆರೋಪಿ.
ನಗರದ ದಡ್ಡಲ್ ಕಾಡ್ ಎಂಬಲ್ಲಿ ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿ ಸರಕಾರದ ಬೇರೆ ಬೇರೆ ಇಲಾಖೆಯ ಕಚೇರಿ ಮತ್ತು ನ್ಯಾಯಾಲಯಕ್ಕೆ ವಂಚಿಸುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಮುಹಮ್ಮದ್ ಅಲಿ ಗುರುಪುರದಲ್ಲಿ ಬಂಧಿಸಿದ್ದು, ನಕಲಿ ಆಧಾರ್ ಕಾರ್ಡ್, ಪಹಣಿ ಪತ್ರ ಸೃಷ್ಟಿಸಿ ವಂಚಿಸಿ ಬಂಧನಕ್ಕೊಳಗಾದವರ ಸಂಖ್ಯೆ 6ಕ್ಕೆ ಏರಿದಂತಾಗಿದೆ. ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆ ಇದ್ದು, ಸದ್ಯ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ನಗರದ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಮುಲ್ಕಿ ನಿವಾಸಿ ಅಬ್ದುಲ್ ರೆಹಮಾನ್ ಎಂಬಾತನನ್ನು ಸೆ.9 ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಆತ ನೀಡಿ ಮಾಹಿತಿಯಂತೆ ತೊಕ್ಕೊಟ್ಟು ಅಂಬಿಕಾ ರಸ್ತೆ ನಿವಾಸಿ ನಿಶಾಂತ್ ನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿ ಬಂಟ್ವಾಳ ತಾಲೂಕಿನ ಪುದು ಸಜೀರ್ ರಸ್ತೆ ನಿವಾಸಿ ನಿತಿನ್ ಕುಮಾರ್, ಇಂದಿರಾನಗರ ಹಾಲಾಡಿ ಸಜಿಪಮುನ್ನೂರು ನಿವಾಸಿ ಹಸನ್ ರಿಯಾಝ್, ಕಾವೂರು ಫಳ್ನೀರ್ ನಿವಾಸಿ ಹನೀಫ್ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲೂ ಒಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಸುರತ್ಕಲ್ ಪೊಲೀಸರು ಗುರುಪುರ ಉಳಾಯಿಬೆಟ್ಟು ನಿವಾಸಿ ಮುಹಮ್ಮದ್ ಅಲಿಯನ್ನು ಬುಧವಾರ ಬಂಧಿಸಿ ನ್ಯಾಯಾಲಯಲಕ್ಕೆ ಹಾಜರು ಪಡಿಸಿದ್ದಾರೆ. ಸದ್ಯ ಈತನ ಬಂಧನದೊಂದಿಗೆ ನಕಲಿ ಆಧಾರ್ ಕಾರ್ಡ್, ಪಹಣಿ ಪತ್ರ ಸೃಷ್ಟಿಸಿ ವಂಚಿಸುತ್ತಿದ್ದ ಪ್ರಕರಣದಲ್ಲಿ ಒಟ್ಟು 6ಮಂದಿ ಬಂಧನಕ್ಕೊಳಗಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.