ಬಾನು ಮುಷ್ತಾಕ್​ರಿಂದ ದಸರಾ ಉದ್ಘಾಟನೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ: ವಿಚಾರಣೆಗೆ ಅಸ್ತು

ನವದೆಹಲಿ: ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದ್ದು, ಶುಕ್ರವಾರ ವಿಚಾರಣೆ ನಡೆಸಲು ಸರ್ವೋಚ್ಛ ನ್ಯಾಯಾಲಯ ಒಪ್ಪಿಕೊಂಡಿದೆ.

ಸೆಪ್ಟೆಂಬರ್ 22 ರಂದು ಕಾರ್ಯಕ್ರಮ ನಡೆಯಲಿರುವುದರಿಂದ ತುರ್ತು ವಿಚಾರಣೆಗಾಗಿ ಅರ್ಜಿದಾರರ ಪರ ವಕೀಲ ಎಚ್ ಎಸ್ ಗೌರವ್ ಅವರು ಮುಖ್ಯ ನ್ಯಾಯಮೂರ್ತಿ(ಸಿಜೆಐ) ಬಿ ಆರ್ ಗವಾಯಿ ಅವರ ಪೀಠದ ಮುಂದೆ ಮನವಿ ಮಾಡಿದರು. ಮನವಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್ ನಾಳೆ ಮೇಲ್ಮನವಿಯನ್ನು ಆಲಿಸಲು ಒಪ್ಪಿಕೊಂಡಿದೆ.

ಕರ್ನಾಟಕದಲ್ಲಿ ಸೆಪ್ಟೆಂಬರ್ 22 ರಂದು ಮೈಸೂರಿನ ಚಾಮುಂಡೇಶ್ವರಿ ಪೂಜೆ ಮಾಡಲು ಹಿಂದೂಯೇತರ ವ್ಯಕ್ತಿಗೆ ಅವಕಾಶ ನೀಡಲಾಗಿದೆ ಎಂದು ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಗೌರವ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಮೇಲ್ಮನವಿಯಲ್ಲಿ, ಅರ್ಜಿದಾರರ ಯಾವುದೇ ಕಾನೂನು ಅಥವಾ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಲಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತಪ್ಪಾಗಿ ತೀರ್ಪು ನೀಡಿದೆ ಎಂದು ಹೇಳಿದ್ದಾರೆ.

ಮುಷ್ತಾಕ್ ಅವರು ಈ ಹಿಂದೆ “ಹಿಂದೂ ವಿರೋಧಿ” ಹೇಳಿಕೆಗಳನ್ನು ನೀಡಿರುವುದರಿಂದ ಅವರ ಭಾಗವಹಿಸುವಿಕೆಯು ಜನರ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

error: Content is protected !!