ಮಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಲ್ಲಿಕಟ್ಟೆ ಶಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಸಾಲ ಮಂಜೂರು ಮಾಡಿಸಿಕೊಂಡು ಬ್ಯಾಂಕಿಗೆ ವಂಚನೆ ಮಾಡಿದ ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಕರಣದ ಮುಂದಿನ ತನಿಖೆಯನ್ನು ಮಂಗಳೂರು ಸಿಸಿಬಿ ಘಟಕಕ್ಕೆ ಹಸ್ತಾಂತರಿಸಲಾಗಿದೆ.
ಮಂಗಳೂರಿನ ಪಂಪ್‌ವೆಲ್‌ನ ನಾರ್ತನ್ ಸ್ಕೈ ಸಿಟಿ, ಉಜ್ಜೋಡಿ, ಮುನೀರ್ ಕದಮನ್ ಅಬೂಬಕರ್ (53), ನಂದಿಗುಡ್ಡೆ, ಲಿಯೋನಾ ಅಪಾರ್ಟ್‌ಮೆಂಟ್ ಸಮೀಪದ ಹುಸೇನ್.ಪಿ (52) ಹಾಗೂ ಜೆಪ್ಪು ಮಾರ್ಗನ್ಸ್ ಗೇಟ್ ನ ಇರ್ಫಾನ್ ಸೆಂಟರ್ ನಿವಾಸಿ ಮೊಹಮ್ಮದ್ ಮುಸ್ತಾಫ (27) ಬಂಧಿತ ಆರೋಪಿಗಳು.
ಮಂಗಳೂರು ನಗರ ಪೊಲೀಸ್ ಆಯುಕ್ತರು ನೀಡಿದ ಮಾಹಿತಿಯ ಪ್ರಕಾರ, M/s Electro World Enterprises ಸಂಸ್ಥೆ ನಕಲಿ ದಾಖಲೆಗಳನ್ನು ಸಲ್ಲಿಸಿ ಸುಮಾರು ₹1.20 ಕೋಟಿ ಸಾಲವನ್ನು ಹಾಗೂ M/s M H Enterprises ಸಂಸ್ಥೆ ನಕಲಿ ದಾಖಲೆಗಳ ಆಧಾರದ ಮೇಲೆ ₹1.30 ಕೋಟಿ ಸಾಲವನ್ನು MSME ಯೋಜನೆಯಡಿಯಲ್ಲಿ ಪಡೆಯಲು ಯಶಸ್ವಿಯಾದವು. ಆದರೆ ಈ ಮೊತ್ತವನ್ನು ಉದ್ದೇಶಿತ ವ್ಯವಹಾರಗಳಿಗೆ ಬಳಸದೆ, ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿ ಸ್ವಂತ ಉಪಯೋಗಕ್ಕೆ ಬಳಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಕುರಿತು ಎಸ್.ಬಿ.ಐ. ಮಲ್ಲಿಕಟ್ಟೆ ಶಾಖೆಯ ಚೀಪ್ ಮ್ಯಾನೇಜರ್ 16 ಸೆಪ್ಟೆಂಬರ್ 2025 ರಂದು ನೀಡಿದ ದೂರಿನ ಮೇರೆಗೆ, ಮಂಗಳೂರು ಪೂರ್ವ ಠಾಣೆಯಲ್ಲಿ ಅ.ಕ್ರ. 130/2025 ಮತ್ತು 131/2025 ಪ್ರಕರಣಗಳು ಭಾರತೀಯ ನ್ಯಾಯ ಸಂಹಿತೆಯ ಕಲಂ 316(2), 316(5), 318(2), 318(3) ಜೊತೆಗೆ 3(5) ರಂತೆ ದಾಖಲಿಸಲಾಗಿದೆ.
ತನಿಖೆಯ ವೇಳೆ, ಮುನೀರ್ ಕದಮನ್ ಅಬೂಬಕರ್ ಇಬ್ಬರಲ್ಲೂ ಪ್ರಮುಖ ಪಾತ್ರವಹಿಸಿರುವುದು ದೃಢಪಟ್ಟಿದೆ. ಬಂಧಿತ ಆರೋಪಿಗಳನ್ನು ದಸ್ತಗಿರಿ ಕ್ರಮದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಲಾಗಿದೆ. ಪ್ರಕರಣದ ಮುಂದಿನ ತನಿಖೆಯನ್ನು ಮಂಗಳೂರು ಸಿಸಿಬಿ ಘಟಕಕ್ಕೆ ಹಸ್ತಾಂತರಿಸಲಾಗಿದೆ.