ನವದೆಹಲಿ: ಡೊನಾಲ್ಡ್ ಟ್ರಂಪ್ ಎಂಬ ಹೆಸರಿನೊಳಗೆ “ಡೊನಾಲ್ಡ್” ಇದ್ದರೂ, ಆತನ ಮಾತುಗಳಲ್ಲಿ ಮಾತ್ರ ಯಾವತ್ತೂ ಡೊಂಕು ಕಡಿಮೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಜೊತೆ ಒಂದು ಫೋನ್ ಕರೆ ಮಾಡಿ, ಅಮೆರಿಕ ಅಧ್ಯಕ್ಷ ಟ್ರಂಪ್ ಜಗತ್ತಿನ ವ್ಯಾಪಾರ ನೀತಿಗಳನ್ನು ಚಹಾ ಅಂಗಡಿಯ ʻಗಪ್ಗಾಸಿʼನ ಚರ್ಚೆಯ ಮಟ್ಟಕ್ಕೆ ಇಳಿಸಿದ್ದಾರೆ.

ಭಾರತ ಯುರೋಪ್ ಮತ್ತು ಅರಬ್ ಲೀಗ್ ಜೊತೆ ವ್ಯವಹಾರ ಮಾಡ್ತಿದೆ ಅನ್ನೋ ಸುದ್ದಿ ಟ್ರಂಪ್ ಕಿವಿಗೆ ಬಿದ್ದ ತಕ್ಷಣ, ಆತ ಎಚ್ಚೆತ್ತುಕೊಂಡದ್ದು ಒಂದು ದೇಶದ ಅಧ್ಯಕ್ಷನಂತೆ ಅಲ್ಲ — ಮಾರುಕಟ್ಟೆಯಲ್ಲಿ ಗ್ರಾಹಕ ಕಳೆದುಕೊಳ್ಳುವ ವ್ಯಾಪಾರಿಯಂತೆ. ತಕ್ಷಣವೇ “US–India Trade Deal” ಅನ್ನೋ ದೊಡ್ಡ ಶಬ್ದದ ಬಲೂನ್ ಊದಿ, ಅದರೊಳಗೆ ಅರ್ಧ ಬೇಯಿಸಿದ ಘೋಷಣೆಗಳನ್ನು ತುಂಬಿದ್ದಾರೆ.
ಮೊದಲು, “25% ಸುಂಕ ಇತ್ತು, 18%ಗೆ ಇಳಿಸಿದ್ದೀನಿ” ಮತ್ತೆ ಅದೇ ಉಸಿರಲ್ಲಿ, “ಇಲ್ಲ… ಮುಂದಕ್ಕೆ ಶೂನ್ಯಕ್ಕೂ ಬರಬಹುದು”
ಅಂದರೆ, ಟ್ರಂಪ್ ಬಳಿ ನೀತಿ ಅನ್ನೋದು ಡ್ರಾಫ್ಟ್ ಮೋಡ್‌ನಲ್ಲೇ ಇದೆ. ಸೇವ್ ಬಟನ್ ಒತ್ತೋದು ಮಾತ್ರ ಮರೆತು ಹೋಗಿದ್ದಾನೆ.
ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಮೋದಿ ಬಗ್ಗೆ ಹೊಗಳಿಕೆ ಸುರಿಸಿ, “ಅವರು ನನ್ನ ಆತ್ಮೀಯ ಸ್ನೇಹಿತ” ಎಂದಿದ್ದಾರೆ. ಆದರೆ ಸ್ನೇಹಿತನ ದೇಶದ ಬಗ್ಗೆ ಮಾತನಾಡುವಾಗ ಕನಿಷ್ಠ ಆ ದೇಶದ ಸರ್ಕಾರ ಏನು ಯೋಚಿಸುತ್ತದೆ ಅನ್ನೋದನ್ನೇ ಕೇಳದಿರುವುದು — ಇದು ಸ್ನೇಹವೋ, ಸ್ವಯಂಘೋಷಿತ ಮಹಾನ್‌ತನವೋ?

ಇನ್ನೂ ಮುಂದೆ ಹೋಗಿ, “ಭಾರತ ಇನ್ನು ರಷ್ಯಾದಿಂದ ತೈಲ ಖರೀದಿಸಲ್ಲ” “ಅಮೆರಿಕ ಮತ್ತು ವೆನೆಜುವೆಲಾದಿಂದಲೇ ತಗೊಳುತ್ತೆ” “ಅಮೆರಿಕದಿಂದ ಬಹುತೇಕ ಎಲ್ಲವನ್ನೂ ಖರೀದಿಸಲಿದೆ” ಎನ್ನುವ ಮೂಲಕ, ಭಾರತವನ್ನು ಸ್ವತಂತ್ರ ರಾಷ್ಟ್ರವಲ್ಲ, ತಮ್ಮ ಆನ್‌ಲೈನ್ ಶಾಪಿಂಗ್ ಕಾರ್ಟ್ ಮಾಡಿಕೊಂಡಿದ್ದಾರೆ ಟ್ರಂಪ್. ಈ ಎಲ್ಲಾ ಘೋಷಣೆಗಳ ಮೇಲೆ ಭಾರತ ಸರ್ಕಾರ ಮೌನ ವಹಿಸಿದೆ. ಬಹುಶಃ, ಮೂರ್ಖತನಕ್ಕೆ ಪ್ರತಿಕ್ರಿಯೆ ಕೊಡೋದು ಕೂಡ ವ್ಯರ್ಥ ಅನ್ನೋ ತೀರ್ಮಾನಕ್ಕೆ ಬಂದಿರಬಹುದು.
ಒಟ್ಟಾರೆ ಟ್ರಂಪ್ ಮಾತುಗಳಲ್ಲಿ ಘೋಷಣೆ ಜಾಸ್ತಿ, ಗಂಭೀರತೆ ಕಡಿಮೆ. ರಾಜಕೀಯ ಅವನಿಗೆ ರಿಯಾಲಿಟಿ ಶೋ. ವ್ಯಾಪಾರ ನೀತಿ — ಸ್ಕ್ರಿಪ್ಟ್ ಇಲ್ಲದ ನಾಟಕ. ಜಗತ್ತು ಕೇಳ್ತಿದೆ, “ಇವನು ಅಧ್ಯಕ್ಷನಾ? ಅಥವಾ ದಿನವೂ Breaking News ಉತ್ಪಾದಿಸುವ ಯಂತ್ರನಾ?”
