ಏ.1 ರಿಂದ ಆದಾಯ ತೆರಿಗೆ ಕಾಯ್ದೆ 2025 ಜಾರಿ; ಮದ್ಯ, ಸಿಗರೇಟ್ ಬೆಲೆ ಏರಿಕೆ

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು, ಆದಾಯ ತೆರಿಗೆ ಕಾಯ್ದೆ 2025 ಅನ್ನು ಏಪ್ರಿಲ್ 1 ರಿಂದ ಜಾರಿಗೆ ತರಲಾಗುವುದು. ನಿಯಮಗಳು ಮತ್ತು ತೆರಿಗೆ ರಿಟರ್ನ್ಸ್ ಫಾರ್ಮ್‌ಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಏಪ್ರಿಲ್ 1 ರಿಂದ, ಆರು ದಶಕಗಳಷ್ಟು ಹಳೆಯದಾದ ತೆರಿಗೆ ಕಾನೂನಿನ ಬದಲಿಗೆ ಹೊಸ ಆದಾಯ ತೆರಿಗೆ ಕಾಯ್ದೆ 2025 ಜಾರಿಗೆ ಬರಲಿದೆ. 2026-27ರ ಬಜೆಟ್‌ನಲ್ಲಿ ತೆರಿಗೆ ಕಾನೂನುಗಳಲ್ಲಿ ಮಾಡಲಾದ ಬದಲಾವಣೆಗಳನ್ನು ಹೊಸ ಕಾನೂನಿನಲ್ಲಿ ಸೇರಿಸಲಾಗುವುದು. ಪ್ರಮುಖ ನಗರ ಮತ್ತು ಆರ್ಥಿಕ ಕೇಂದ್ರಗಳಲ್ಲಿ ಏಳು ಹೈ-ಸ್ಪೀಡ್ ರೈಲು ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ‍

ಪ್ರಯಾಣಿಕ ಹಾಗೂ ಪರಿಸರ ಸ್ನೇಹಿ ಸಾರಿಗೆಗೆ ಒತ್ತು ನೀಡುವಲ್ಲಿ ಈ ಕಾರಿಡಾರ್ ಘೋಷಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮುಂಬೈ–ಪುಣೆ, ಪುಣೆ –ಹೈದರಾಬಾದ್, ಹೈದರಾಬಾದ್–ಬೆಂಗಳೂರು, ಹೈದರಾಬಾದ್–ಚೆನ್ನೈ, ಚೆನ್ನೈ–ಬೆಂಗಳೂರು, ದೆಹಲಿ–ವಾರಾಣಸಿ ಹಾಗೂ ವಾರಾಣಸಿ–ಸಿಲಿಗುರಿ ಪ್ರಸ್ತಾವಿತ ರೈಲು ಮಾರ್ಗಗಗಳು. ಇದು ಭಾರತದ ಹಣಕಾಸು ಹಬ್, ತಂತ್ರಜ್ಞಾನ ಕೇಂದ್ರ ಹಾಗೂ ಉತ್ಪಾದನಾ ಕ್ಲಸ್ಟರ್‌ಗಳನ್ನು ಬೆಸೆಯಲಿದೆ. ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ಹಾಸ್ಟೆಲ್‌ ಸ್ಥಾಪನೆ , 15,000 ಶಾಲೆ, 500 ಕಾಲೇಜುಗಳಲ್ಲಿ ಕಂಟೆಂಟ್‌ ಕ್ರಿಯೆಟರ್ಸ್‌ ಲ್ಯಾಬ್‌ ಸ್ಥಪನೆ ಮಾಡುವುದಾಗಿ ಘೋಷಿಸಿದರು.

ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಪೂರ್ವ ಘಟ್ಟಗಳ ಅರಕು ಕಣಿವೆ ಮತ್ತು ಪಶ್ಚಿಮ ಘಟ್ಟಗಳಲ್ಲಿ ಪರಿಸರ ಸ್ನೇಹಿ ಪರ್ವತ ಹಾದಿಗಳನ್ನು ಅಭಿವೃದ್ಧಿಪಡಿಸಲು ನಿರ್ಧಾರ ಮಾಡಲಾಗಿದೆ.

ಚರ್ಮದ ಉತ್ಪನ್ನಗಳು, ಮೊಬೈಲ್ ಫೋನ್‌ಗಳು, ಇವಿ ಬ್ಯಾಟರಿಗಳು, ಮೈಕ್ರೋವೇವ್ ಓವನ್, 17 ಕ್ಯಾನ್ಸರ್ ಔಷಧಿಗಳು, ಸೌರ ಫಲಕಗಳು ಅಗ್ಗವಾಗಲಿವೆ. ಮದ್ಯ ಹಾಗೂ ಸಿಗರೇಟ್ ಬೆಲೆ ಏರಿಕೆಯಾಗಲಿದೆ. ಆದಾಯ ತೆರಿಗೆಯಲ್ಲಿ ಪದ್ದತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ ವರ್ಷ ಜಾರಿಯಾದ ಹಳೇ ಪದ್ದತಿಯಂತೆ ಮುಂದುವರೆಯಲಿದೆ.

ಕ್ರೀಡೆಗಳಿಗೆ ಉತ್ತೇಜನ ಕೊಡಲು ಖೇಲೋ ಇಂಡಿಯಾ ಮಿಷನ್. ಮುಂದಿನ‌ ಹತ್ತು ವರ್ಷಗಳಲ್ಲಿ ಕ್ರೀಡಾ ವಲಯಕ್ಕೆ ಈ ಮೂಲಕ ಒತ್ತು. ಕ್ರೀಡಾ ವಲಯದಲ್ಲಿ ಉದ್ಯೋಗ ಸೃಷ್ಟಿ, ಪ್ರತಿಭಾವಂತ ಕ್ರೀಡಾಪಟುಗಳನ್ನು ಉತ್ತೇಜಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಮುಂದಿನ ಐದು ವರ್ಷಗಳಲ್ಲಿ 20 ಹೊಸ ರಾಷ್ಟ್ರೀಯ ಜಲಮಾರ್ಗಗಳನ್ನು ಕಾರ್ಯಗತಗೊಳಿಸಲು ನಿರ್ಧಾರ. ಜಲಮಾರ್ಗಗಳ ಜಾಗದಲ್ಲಿ ಪ್ರಾದೇಶಿಕ ಶ್ರೇಷ್ಠತೆಯ ಸಂಸ್ಥೆಗಳಾಗಿ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ಒಳನಾಡಿನ ಜಲಮಾರ್ಗಗಳನ್ನು ಪೂರೈಸುವ ಹಡಗು ದುರಸ್ತಿ ಪರಿಸರ ವ್ಯವಸ್ಥೆಯನ್ನು ವಾರಾಣಸಿ ಮತ್ತು ಪಾಟ್ನಾದಲ್ಲಿ ಸ್ಥಾಪನೆ ಮಾಡಲಾಗುತ್ತದೆ.

ವಿಕಸಿತ್ ಭಾರತ್ ಗಾಗಿ ಬ್ಯಾಂಕಿಂಗ್ ಕ್ಷೇತ್ರ ಬಲಪಡಿಸಲು ಉನ್ನತಮಟ್ಟದ ಸಮತಿ ರಚನೆ ಮಾಡಲಾಗುತ್ತದೆ. ಈ ಸಮಿತಿ ಎಲ್ಲಾ ವಲಯಗಳನ್ನು ಅಧ್ಯಯನ ಮಾಡಿ, ಹೂಡಿಕೆಗೆ ಸಲಹೆ ನೀಡುತ್ತದೆ. ಗ್ರಾಹಕರಿಗೆ ಹೂಡಿಕೆ ಭದ್ರತೆ ನೀಡುತ್ತದೆ.

error: Content is protected !!