ಖಾದರ್ ‌ಸ್ಪೀಕರಾ? ಉಸ್ತುವಾರಿಯಾ? ಕೆಂಪು ಕಲ್ಲು, ಮರಳಿಗೆ ರೇಟ್‌ ಹೆಚ್ಚು ಮಾಡುವಲ್ಲಿ ನಿಮ್ಮ ಕೊಡುಗೆ ಇದೆ!: ಕಾಮತ್‌ ಆರೋಪ

ಮಂಗಳೂರು: ಜಿಲ್ಲೆಯ ಉಸ್ತುವಾರಿ ಸಚಿವರು ಮಾಡಬೇಕಾದ ಕೆಲಸವನ್ನು ಸ್ಪೀಕರ್ ಖಾದರ್‌ ‌ಮಾಡ್ತಾ ಇದ್ದಾರೆ.‌ ಸ್ಪೀಕರ್ ಆಗುವವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಪಕ್ಷದ ಚಟುವಟಿಕೆಗಳಿಂದ ದೂರ ಉಳಿದು ಬಳಿಕ ಪೀಠದಲ್ಲಿ ಕೂತ್ಕೋಬೇಕು. ಆದರೆ ಸ್ಪೀಕರ್‌ ಖಾದರ್‌ ತಮ್ಮ ಹುದ್ದೆಯ ಘನತೆಯನ್ನು ಕಳೆದುಕೊಂಡಿದ್ದಾರೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಸ್ಪೀಕರ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತಾಡಿದ ಅವರು, ಕಳೆದ 75 ವರ್ಷದಲ್ಲಿ ಸ್ಪೀಕರ್‌ಗಳು ಹೀಗೆ ಇರ್ಲಿಲ್ಲ. ಸ್ಪೀಕರ್‌ ಆದವರು ಕೆಂಪುಕಲ್ಲು, ಜನಗಣತಿ‌ ‌ಮಾತಾಡಿ ತಪ್ಪು ಮಾಡಿದ್ದಾರೆ. ಕೋಳಿವಾಡ, ಬೋಪಯ್ಯ ಕಾಗೇರಿಯವರು ಹುದ್ದೆಯ ಘನತೆ ಕಾಪಾಡಿದ್ದರು. ಗುಂಡೂರಾವ್ ಹೆಸರಲ್ಲಿ ನಾನೇ ಜಿಲ್ಲೆಯ ಆಡಳಿತ ಮಾಡ್ಬೇಕು‌ ಅಂತ ಸ್ಪೀಕರ್‌ ತಲೆಯಲ್ಲಿ ಇದ್ದಂತಿದೆ. ಒಂದಾ ಗುಂಡೂರಾವ್‌ ಆಡಳಿತ ಮಾಡ್ಲಿ, ಇಲ್ಲಾಂದ್ರೆ ಸ್ಪೀಕರ್‌ ಮಾಡ್ಲಿ ಎಂದು ಸವಾಲು ಹಾಕಿದರು.

ಕೆಂಪು ಕಲ್ಲು ಸಮಸ್ಯೆ ಪರಿಹಾರವಾಗಿದೆ ಎಂದು ಮೂರು ತಿಂಗಳಿನಿಂದ ಹೇಳಿಕೊಂಡು ಬರ್ತಾ ಇದ್ದಾರೆ. ಆದರೆ ಇದುವರೆಗೂ ಪರಿಹಾರವಾಗಿರುವುದು ಕಾಣ್ತಾ ಇಲ್ಲ. ನಾವು ಪ್ರತಿಭಟನೆ ಮಾಡಿದರೆ ಬಿಜೆಪಿಗೆ ಏನೂ ಕೆಲ್ಸ ಇಲ್ಲ ಅಂತೀರಿ. ಜಿಲ್ಲಾ ಉಸ್ತುವಾರಿ ಸಚಿವರು ಸಭೆ, ಮಾಹಿತಿ ನೀಡುವ ಬದಲು ಸ್ಪೀಕರ್‌ ಮಾಹಿತಿ ಕೊಡುತ್ತಾರೆ. 25 ಜನರು ಲೀಸ್‌ಗೆ ಹಾಕಿದ್ದಾರೆ ಎಂದು ಹೇಳಿದ್ದೀರಿ. ಹಾಗಾದರೆ ಕೆಂಪು ಕಲ್ಲು ಸಮಸ್ಯೆ ಪರಿಹಾರ ಆಯ್ತಾ? ಎಂದು ಕಾಮತ್‌ ಪ್ರಶ್ನಿಸಿದರು.

ಕಾಂಗ್ರೆಸ್‌ ಆಡಳಿತ ಬಂದ ಮೇಲೆಯೇ ಜಿಲ್ಲೆಯಲ್ಲಿ ಈ ಎಲ್ಲ ಸಮಸ್ಯೆಗಳು ಸೃಷ್ಟಿಯಾಗಿದೆ. ನೀವು ಹೇಳಿದಂತೆ ಕೆಂಪು ಕಲ್ಲು ಸಮಸ್ಯೆ ಪರಿಹಾರವಾಗಿದ್ದರೆ ಕಲ್ಲಿನ ರೇಟ್‌ ಯಾಕೆ ಇಷ್ಟು ಏರಿಕೆಯಾಗಿದೆ? 28ಕ್ಕೆ ಸಿಗುತ್ತಿದ್ದ ಕೆಂಪು ಕಲ್ಲಿಗೆ 65-70 ಆಗಿದ್ದು ಯಾರಿಂದ? ಜಿಲ್ಲೆಯಲ್ಲಿ ಕೆಂಪು ಕಲ್ಲು, ಮರಳಿಗೆ ರೇಟ್‌ ಹೆಚ್ಚು ಮಾಡುವಲ್ಲಿ ನಿಮ್ಮ ಕೊಡುಗೆ ಇದೆ. ಜಿಲ್ಲೆಯಲ್ಲಿ ಸ್ಪೀಕರ್‌ ಬಂದ್‌ ಮಾಡಿದ ಸ್ಪೀಕರ್‌ ಕೆಂಪು ಕಲ್ಲು ಬಂದ್‌ ಮಾಡಿದಿರಿ. ಆಗದ ಕೆಲಸವನ್ನು ಆಗಿದೆ ಎಂದು ತೋರಿಸುತ್ತಿದ್ದೀರಿ ಎಂದು ಆರೋಪಿಸಿದರು.

ಸ್ಟಿಕ್ಕರ್‌ ಅಂಟಿಸುವ ಬಗ್ಗೆ ಮಾಧ್ಯಮದವರೇ ನಿಮಗೆ ಗೊತ್ತಿತ್ತಾ? ಪ್ರಶ್ನಿಸಿದ ಕಾಮತ್‌, ಜನರಿಗೆ ಮಾಹಿತಿ ನೀಡದೆ ಎಲ್ಲರ‌ ಮನೆಗೆ ಸ್ಟಿಕ್ಕರ್ ಅಂಟಿಸುವ ಅಧಿಕಾರ ಕೊಟ್ಟದು ಯಾರು? ಗಣತಿಗೆ ಬರುವ ಮುಂಚೆ ಜನರು ಯಾವ ಯಾವ ದಾಖಲೆಗಳನ್ನು ರೆಡಿ ಮಾಡಿಟ್ಟುಕೊಳ್ಳಬೇಕು ಎಂದು ಮೊದಲೇ ಮಾಹಿತಿ ನೀಡಬೇಕು ಎಂದು ನಿಮಗನಿಸಲಿಲ್ಲವೇ? ಎಂದು ಅವರು ಪ್ರಶ್ನಿಸಿದರು.

ನವರಾತ್ರಿ ಹಬ್ಬದಂದೇ ಜನಗಣತಿ ಮಾಡಿದ್ದಾರೆ. ಈ ವೇಳೆ ಕೆಲವರು ರಜೆಯಲ್ಲಿ ಪ್ರವಾಸಕ್ಕೆ ಹೋಗುತ್ತಾರೆ. ಸರ್ಕಾರ ಮೂರ್ಖರ ರೀತಿ ವರ್ತಿಸಿದೆ. ಕ್ರಿಶ್ಚಿಯನ್‌, ಮುಸ್ಲಿಮರಿಗೆ ಪೂರ್ಣ ಒಂದೇ ಜಾತಿ ಸೂಚಿಸಲು ಹೇಳಿದ್ದಾರಲ್ವಾ? ಹಾಗಾದರೆ ಕ್ರೈಸ್ತ, ಮುಸ್ಲಿಮರಲ್ಲಿ ಜಾತಿನ ಇಲ್ವಾ? ಕ್ರಿಶ್ಚಿಯನ್‌ ಬಂಟ, ಕ್ರಿಶ್ಚಿಯನ್‌ ಬ್ರಾಹ್ಮಣ ಹೀಗೆ ಜಾತಿಗಳಲ್ಲಿ ಗೊಂದಲ ಮಾಡಿದ್ದಾರೆ ಎಂದು ಕಾಮತ್‌ ಆರೋಪಿಸಿದರು.

ಜಿಲ್ಲೆಯಲ್ಲಿ ಎಷ್ಟು ಮಂದಿ ಆಶಾ ಕಾರ್ಯಕರ್ತರಿದ್ದಾರೆ ಎಂದು ಗೊತ್ತಿದೆಯಾ? ಒಂದು ಮನೆಯನ್ನು ಗಣತಿ ಮಾಡಲು ಸುಮಾರು ಒಂದೂವರೆ ಗಂಟೆ ಬೇಕಾದರೆ ಹನ್ನೆರಡು ದಿನಗಳಲ್ಲಿ ಜಾತಿ ಗಣತಿ ಮುಗಿಸಲು ಸಾಧ್ಯವಾ? ಪರಿಶಿಷ್ಠ ಜಾತಿಯವರ ಮನೆಗೆ ಹಿಂದುಳಿದವರ ಸ್ಟಿಕ್ಕರ್‌ ಅಂಟಿಸಿದ್ದಾರೆ. ಹೀಗೆ ಜಾತಿಗಣತಿ ಗೊಂದಲದಿಂದ ಕೂಡಿದೆ ಎಂದರು.

ಬಂಟವರ ಯಾನೆ ನಾಡವರ ಸಮುದಾಯದಲ್ಲಿ ಬಂಟ ಜಾತಿಯನ್ನು ಕಾಂಗ್ರೆಸ್ ತುಂಡು ಮಾಡಿತು. ಜಾತಿಯ ಕಾಲಂನಲ್ಲಿ ಐದು ಪದ ಮಾತ್ರ ಬಳಸಿಕ್ಕೆ ಅವಕಾಶ ಇದೆ. ಕೆಲವು ಜಾತಿಗಳು ಐದು ಅಕ್ಷರಗಳಿಂತ ಜಾಸ್ತಿ ಇದ್ದು ಅದನ್ನು ʻನನ್ ಆಫ್ ಅದರ್ಸ್ʼ ಕಾಲಂನಲ್ಲಿ ಬರೆಯಲು ಸೂಚಿಸಿದ್ದಾರೆ. ಜಾತಿಯನ್ನು ಕಿತ್ತು ಹಾಕಿದ್ದಕ್ಕಾಗಿ ಆದಿ‌ದ್ರಾವಿಡರಿ ಪ್ರತಿಭಟನೆ ಮಾಡಿ, ತಾವು ಏನು ಮೆನ್ಷನ್‌ ಮಾಡ್ಬೇಕು ಅಂತಾ ಗೊತ್ತಾಗ್ತಾ ಇಲ್ಲ ಎಂದು ಗೊಂದಲ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಹಲವಾರು ಗೊಂದಲಗಳಿವೆ ಎಂದರು.

ಆಶಾ ಕಾರ್ಯಕರ್ತರನ್ನು ಒತ್ತಾಯಪೂರ್ವಕವಾಗಿ ಬಳಸ್ತಾ ಇದ್ದಾರೆ. ಗ್ರಾಮಾಂತರದಲ್ಲಿ 5 ಸಾವಿರ, ನಗರದಲ್ಲಿ 10 ಸಾವಿರ ಸಂಬಳ ಕೊಡದೇ ಇದ್ದರೆ ಕೆಲಸ ಮಾಡುವುದಿಲ್ಲ ಎಂದು ಆಶಾ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂ ಧಾರ್ಮಿಕ ಹಬ್ಬದಂದೇ ಜಾತಿ ಗಣತಿ ಮಾಡಿ ಹಿಂದೂ ಸಮಾಜ ಒಡೆಯಲು ನಿಮ್ಮ‌ ಹಿಡನ್ ಅಜೆಂಡಾ ಜಾರಿ ಮಾಡುತ್ತಿದ್ದೀರಿ. ಕೆಲವರು ಈ ಸ್ಟಿಕ್ಕರ್‌ ಮಾಹಿತಿ ಇಲ್ಲದೆ, ಭಯದಿಂದ ಹರಿದು ಬಿಸಾಡಿದ್ದಾರೆ ಎಂದರು.

ಹಿಂದೂಗಳ ಹಬ್ಬದ ರಜೆಯ ಸಂದರ್ಭದಲ್ಲಿ   ಸಮೀಕ್ಷೆ ಮಾಡುವ ಉದ್ದೇಶವೇನು?: ಕುಂಪಲ ಪ್ರಶ್ನೆ

ಆರಂಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಜನಗಣತಿ‌, ಸ್ಟಿಕ್ಕರ್ ಅಂಟಿಸುವ ಮೂಲಕ ಸಮಸ್ಯೆ ಸೃಷ್ಟಿಯಾಗಿದೆ. ಮೊದಲೇ ಸಭೆ ನಡೆಸಿ ಪೂರ್ಣ ಮಾಹಿತಿ ಜನರಿಗೆ ತಿಳಿಸಿದ್ದರೆ ಜನರಿಗೆ ಸಂದೇಹ ಬರ್ತಾ ಇರ್ಲಿಲ್ಲ ಎಂದರು. ಸ್ಪೀಕರ್ ಖಾದರ್‌ ನಡೆಯನ್ನು ಖಂಡಿಸಿದ ಅವರು ಸ್ಪೀಕರ್ ಆಗಿ ಸಭೆ,‌ ‌ಕಾರ್ಯಾಗಾರ ನಡೆಸುವುದು ಸರಿಯಾ? ಉಸ್ತುವಾರಿ ಮಾಡುವ ಕೆಲಸ ಸ್ಪೀಕರ್ ಮಾಡ್ತಾ ಇದ್ದಾರೆ. ಇವರು ಸ್ಪೀಕರ ಅಥವಾ ಉಸ್ತುವಾರಿಯಾ? ಸ್ಟಿಕ್ಕರ್ ಅಂಟಿಸಿದ ಬಳಿಕ ಸಭೆ ಮಾಡಿದ್ದು ಯಾಕೆ? 165 ಕೋಟಿ ಹಣ ಖರ್ಚು ಮಾಡಿ ತಯಾರಿಸಿದ ಕಾಂತರಾಜ್ ವರದಿ ಮೇಲೆ ಕಾಂಗ್ರೆಸ್ ಅಪನಂಬಿಕೆ ಇದೆ. ಹಿಂದೂಗಳ ಹಬ್ಬದ ರಜೆಯ ಸಂದರ್ಭದಲ್ಲಿ   ಸಮೀಕ್ಷೆ ಮಾಡುವ ಉದ್ದೇಶವೇನು? ಅವಸರ ಯಾಕೆ? ಸಾಕಷ್ಟು ಸಮಯವಕಾಶ ತೆಗದುಕೊಂಡು ಮಾಡಬೇಕಿತ್ತು ಎಂದರು.

47 ಹಿಂದೂ ಉಪಜಾತಿಗಳ ಮೇಲೆ ಕ್ರಿಶ್ಚಿಯನ್ ಸೇರಿಸಲಾಗಿದೆ. ಮೀಸಲಾತಿ ತೆಗೆದು ಕ್ರಿಶ್ಚಿಯನ್ ಕೊಡುವ ಹುನ್ನಾರ ಇದೆ. ಕ್ರಿಶ್ಚಿಯನ್ ಪದ ಬಳಕೆ‌ ಮಾಡಿ ಮತಾಂತರಕ್ಕೆ ಕುಮ್ಮಕ್ಕು ನೀಡಿದ್ದಾಗಿ ಅಂತ ರಾಜ್ಯ ಸಂಘಟನೆ ಹೇಳಿದೆ. ಸಮಾಜದಲ್ಲಿ ಅಪನಂಬಿಕೆಗೆ ಮೂಡಿದ್ದು ಲೋಪದೋಷ ಸರಿಪಡಿಸಿ ಸಮೀಕ್ಷೆ ನಡೆಸುವಂತೆ ಜಿಲ್ಲ‌ಸಮಿತಿಯಿಂದ ಕೇಳುತ್ತಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪೂಜಾ ಪೈ, ರವಿಶಂಕರ ಮಿಜಾರು, ನಿತಿನ್ ಕುಮಾರ್, ಸಂಜೀವ ಪ್ರಭು, ಮೋಹನ್ ರಾಜ್ ಮತ್ತಿತರರಿದ್ದರು.

error: Content is protected !!