ಮಂಗಳೂರು: ಅಡ್ಯಾರ್ ತಜಿಪೋಡಿ ಪ್ರದೇಶದಲ್ಲಿ ನಡೆದ ಗೋ ಕಳ್ಳತನ ಪ್ರಕರಣವನ್ನು ಕಂಕನಾಡಿ ನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿ, ಗೋವುಗಳನ್ನು ರಕ್ಷಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯ ನಡೆದ ಸ್ಥಳವನ್ನು ಮುಟ್ಟುಗೋಲು ಹಾಕು ಪ್ರಕ್ರಿಯೆ ಆರಂಭಿಸಲಾಗಿದೆ.
ಅಡ್ಯಾರ್ ಕಣ್ಣೂರಿನ ಗಾಣದಬೆಟ್ಟು ನಿವಾಸಿ ಶಾಬಾಜ್ ಅಹಮ್ಮದ್, ಅರ್ಕುಳ ವಳಚ್ಚಿಲ್‌ನ ಯಶಸ್ವಿ ಹಾಲ್ ಸಮೀಪದ ಮೊಹಮ್ಮದ್ ಸುಹಾನ್ ಹಾಗೂ ಅಡ್ಯಾರ್ ಜುಮಾ ಮಸೀದಿ ಬಳಿಯ ನಿವಾಸಿ ವಳಚ್ಚಿಲ್ ಖಾದರ್ ಮೊಹಮ್ಮದ್ @ ಕೋಳಿ ಮೋನಕ್ಕ ಬಂಧಿತ ಆರೋಪಿಗಳು.
ಸೆಪ್ಟೆಂಬರ್ 13ರಂದು ಬೆಳಗ್ಗೆ ಮಂಗಳೂರು ನಗರದ ತಜಿಪೋಡಿ ಮನೆ, ಅಡ್ಯಾರ್‌ನ ಉಮೇಶ್ ಆಳ್ವ ಅವರ ಮನೆಯ ಅಂಗಳದಿಂದ ಒಂದು ಕ್ರಾಸ್ ಜರ್ಸಿ ಹಸುವನ್ನು ಆರೋಪಿಗಳು ಕದ್ದಿದ್ದು, ಈ ಬಗ್ಗೆ ಕ ಅ.ಕ್ರ: 144/2025, ಕಲಂ 303(2) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರ ಪ್ರಕಾರ, ಶಾಬಾಜ್ ಮತ್ತು ಸುಹಾನ್ ಹಸುವನ್ನು ಕದ್ದ ಬಳಿಕ ಖಾದರ್‌ಗೆ ಮಾಂಸ ಮಾಡಲು ಮಾರಾಟ ಮಾಡಿದ್ದರು.
ಬಂಧಿತ ಆರೋಪಿಗಳ ವಿರುದ್ಧ ಹಲವು ಗಂಭೀರ ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಶಾಬಾಜ್ ವಿರುದ್ಧ ಒಂದು ಕೊಲೆ, ಎರಡು ಕೊಲೆ ಪ್ರಯತ್ನ ಮತ್ತು ಒಂದು ದೊಂಬಿ ಪ್ರಕರಣ ದಾಖಲಾಗಿದ್ದು, ಸುಹಾನ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಪ್ರಕರಣವಿದೆ. ಖಾದರ್ ವಿರುದ್ಧ 2024ರಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಗೋ ಹತ್ಯೆ ಪ್ರಕರಣ ದಾಖಲಾಗಿತ್ತು.
ಆರೋಪಿಗಳು ದನ ಕಳ್ಳತನ ಮಾಡಿ ಅದನ್ನು ವಳಚಿಲ್ ಅಬ್ದುಲ್ ಖಾದರ್ ಮನೆಗೆ ಹೊಂದಿಕೊಂಡ ಶೆಡ್ಡ್‌ನಲ್ಲಿ ಹತ್ಯೆ ಮಾಡಿ ಮಾಂಸ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಜಾಗವನ್ನು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ -2020 ರಲ್ಲಿ ಪ್ರದತ್ತವಾದ ಅಧಿಕಾರದಂತೆ ಜಪ್ತಿ ಮಾಡಿ, ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸರ ಪ್ರಕಟಣೆ ತಿಳಿಸಿದೆ.