ಸೆ.17 ರಿಂದ ಹೊನ್ನೆಕಟ್ಟೆ-ಕಾನ ಮೇಲ್ಸೇತುವೆಯಲ್ಲಿ 30 ದಿನಗಳ ಕಾಲ ಸಂಚಾರ ನಿಷೇಧ

ಮಂಗಳೂರು: ಹೊನ್ನೆಕಟ್ಟೆ-ಕಾನ ರೈಲ್ವೆ ಮೇಲ್ಸೇತುವೆಯ ಮೇಲೆ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 16ರ ವರೆಗೆ 30 ದಿನಗಳ ಕಾಲ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಸೇತುವೆಯ ಮೇಲೆ ಕಾಂಕ್ರೀಟಿಕರಣ ಕಾಮಗಾರಿ ನಡೆಯುತ್ತಿರುವುದರಿಂದ, ಈ ಅವಧಿಯಲ್ಲಿ ಈ ಕೆಳಗಿನಂತೆ ಸಂಚಾರ ಮಾರ್ಗಗಳನ್ನು ಬದಲಾಯಿಸಲಾಗಿದೆ:

ಕುಲಾಯಿ-ಹೊನ್ನೆಕಟ್ಟೆ ಮಾರ್ಗವಾಗಿ ಮಂಗಳೂರಿನಿಂದ ಎಂಆರ್‌ಪಿಎಲ್ (ಒಎನ್‌ಜಿಸಿ) ಕಡೆಗೆ ಸಂಚರಿಸುವ ವಾಹನಗಳು ಹೊಸಬೆಟ್ಟು-ಸುರತ್ಕಲ್ ಜಂಕ್ಷನ್ ಮಾರ್ಗವನ್ನು ಬಳಸಿಕೊಂಡು ಎಂಆರ್‌ಪಿಎಲ್ ತಲುಪಬೇಕು.

ಎಂಆರ್‌ಪಿಎಲ್‌ ನಿಂದ ಮಂಗಳೂರು ಕಡೆಗೆ ಬರುವ ವಾಹನಗಳು ಎಂಆರ್‌ಪಿಎಲ್-ಸುರತ್ಕಲ್ ಜಂಕ್ಷನ್ ಮೂಲಕ ಸಂಚರಿಸಿ, ಎನ್‌ಹೆಚ್-66 ಸರ್ವೀಸ್ ರಸ್ತೆಯಾದ ಗೋವಿಂದಾಸ್ ಮೂಲಕ ಮಂಗಳೂರು ತಲುಪಬೇಕು.

ಸುರತ್ಕಲ್-ಗೋವಿಂದಾಸ್ ಸರ್ವೀಸ್ ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ನಿಷೇಧಿಸಲಾಗಿದ್ದು, ಏಕಮುಖ ಸಂಚಾರಕ್ಕೆ ಅನುಕೂಲವಾಗುವಂತೆ ಗೋವಿಂದಾಸ್‌ನಿಂದ ಸುರತ್ಕಲ್ ಕಡೆಗೆ ಸುರತ್ಕಲ್-ಗೋವಿಂದಾಸ್ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಗರಿಷ್ಠ ಸಂಚಾರದ ಅವಧಿಯಲ್ಲಿ (ಬೆಳಗ್ಗೆ 8 ರಿಂದ 9 ಮತ್ತು ಸಂಜೆ 4 ರಿಂದ 6) ಎಂಆರ್‌ಪಿಎಲ್, ಹೆಚ್‌ಪಿಸಿಎಲ್, ಬಿಎಎಸ್‌ಎಫ್ ಮತ್ತು ಇತರ ಕಂಪನಿಗಳಿಗೆ ಸೇರಿದ ವಾಹನಗಳು ಸುರತ್ಕಲ್-ಗೋವಿಂದಾಸ್ ಸರ್ವೀಸ್ ರಸ್ತೆಯನ್ನು ಬಳಸುವುದನ್ನು ನಿಷೇಧಿಸಲಾಗಿದೆ.

ಸಂಚಾರಕ್ಕೆ ಸಹಕರಿಸುವಂತೆ ಮಂಗಳೂರು ಮಹಾನಗರ ಪಾಲಿಕೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!