ದುಬೈ: ಖ್ಯಾತ ಇಸ್ಲಾಮಿಕ್ ಮತ ಪ್ರಚಾರಕ ಜಾಕಿರ್ ನಾಯ್ಕ್ ಅವರಿಗೆ ಏಡ್ಸ್ ರೋಗವಿದೆ, ಜೊತೆಗೆ ಅವರ ಪತ್ನಿ ಫರ್ಹತ್ ನಾಯ್ಕ್ ಮತ್ತು ಮಗಳು ಜಿಕ್ರಾ ನಾಯ್ಕ್ ಕೂಡ ಎಚ್‌ಐವಿ ಪಾಸಿಟಿವ್ ಆಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆದರೆ ಈ ವಿಷಯಕ್ಕೆ ಸ್ವತಃ ನಾಯ್ಕ್ ಪರ ವಕೀಲ ಅಕ್ಬರ್ಡಿನ್ ಅಬ್ದುಲ್ ಖಾದಿರ್ ಸ್ಪಷ್ಟನೆ ನೀಡಿ, ಈ ಎಲ್ಲಾ ಆರೋಪಗಳು “ಸುಳ್ಳು, ಆಧಾರರಹಿತ ಹಾಗೂ ಕಸ” ಎಂದು ತಳ್ಳಿ ಹಾಕಿದ್ದಾರೆ.
ಮಲೇಷ್ಯಾದ MalaysiaKini ಪೋರ್ಟಲ್‌ಗೆ ನೀಡಿದ ಸಂದರ್ಶನದಲ್ಲಿ ಅಕ್ಬರ್ಡಿನ್, “ಝಾಕಿರ್ ನಾಯ್ಕ್ ಕುರಿತು ಹರಡುತ್ತಿರುವ ಸುದ್ದಿಗಳು ಕಟ್ಟುಕಥೆ ಹಾಗೂ ದುರುದ್ದೇಶಪೂರಿತ” ಎಂದರು. “ಅವರ ಆರೋಗ್ಯ ಉತ್ತಮವಾಗಿದ್ದು, ಇತ್ತೀಚೆಗೆ ಭೇಟಿಯಾದಾಗ ಸಂಪೂರ್ಣ ಚೇತರಿಸಿಕೊಂಡಂತೆ ಕಂಡುಬಂದರು. ಝಾಕಿರ್ ಅವರ ಜನಪ್ರಿಯತೆ ಹಾಗೂ ಪ್ರಭಾವದಿಂದಾಗಿ ಕೆಲವರು ಅವರ ಖ್ಯಾತಿಗೆ ಮಸಿ ಬಳಿಯಲು ನಕಲಿ ಸುದ್ದಿಗಳನ್ನು ಹರಡುತ್ತಿದ್ದಾರೆ” ಎಂದು ಆರೋಪಿಸಿದರು.
ಕಾನೂನು ಕ್ರಮದ ಎಚ್ಚರಿಕೆ
ಈ ವದಂತಿಗಳನ್ನು ಹರಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಕೀಲರು ಎಚ್ಚರಿಸಿದ್ದು, ಸುಳ್ಳು ಆರೋಪಗಳ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆಹಚ್ಚುವ ಕಾರ್ಯ ಪ್ರಾರಂಭವಾಗಿದೆ ಎಂದು ತಿಳಿಸಿದರು.
ಹಿನ್ನೆಲೆ
ಜಾಕಿರ್ ನಾಯ್ಕ್ ಮಲೇಷ್ಯಾದಲ್ಲಿ ಶಾಶ್ವತ ನಿವಾಸಿ ಆಗಿದ್ದು, ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (IRF) ಸಂಸ್ಥಾಪಕನೂ ಹೌದು. ಭಾರತದಲ್ಲಿ ಅವರ ವಿರುದ್ಧ ಯುಎಪಿಎ (UAPA), ಹಣ ವರ್ಗಾವಣೆ ಪ್ರಕರಣಗಳು ಹಾಗೂ ಇತರೆ ಕಾನೂನು ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಅವರು ಮಲೇಷ್ಯಾದಲ್ಲಿ ನೆಲೆಸಿದ್ದಾನೆ.