ಉತಾಹ್: ಪ್ರಸಿದ್ಧ ಬಲಪಂಥೀಯವಾದಿ ಚಾರ್ಲಿ ಕಿರ್ಕ್‌ರನ್ನು ಗುಂಡಿಕ್ಕಿ ಕೊಂದ ಆರೋಪದಲ್ಲಿ ಬಂಧಿತನಾಗಿರುವ 22 ವರ್ಷದ ಟೈಲರ್ ರಾಬಿನ್ಸನ್ ಪ್ರಸ್ತುತ ವಿಶೇಷ ವಸತಿ ಘಟಕ (SHU)ನಲ್ಲಿ ವೀಕ್ಷಣೆಯಲ್ಲಿದ್ದಾನೆ.
ಉತಾಹ್ ಕೌಂಟಿ ಶೆರಿಫ್ ಕಚೇರಿಯ ವಕ್ತಾರ ಸಾರ್ಜೆಂಟ್ ರೇಮಂಡ್ ಓರ್ಮಂಡ್ ಹೇಳುವಂತೆ, ರಾಬಿನ್ಸನ್ “ವಿಶೇಷ ವೀಕ್ಷಣೆ” ಅಡಿ ಇದ್ದು, ಆತನು ತನ್ನ ಜೀವಕ್ಕೆ ಅಥವಾ ಇತರರ ಸುರಕ್ಷತೆಗೆ ಅಪಾಯವೋ ಇಲ್ಲವೋ ಎಂಬುದನ್ನು ಮಾನಸಿಕ ಆರೋಗ್ಯ ತಜ್ಞರು ಮೌಲ್ಯಮಾಪನ ಮಾಡುತ್ತಿದ್ದಾರೆ.
ಮೂಲಗಳು ತಿಳಿಸಿದಂತೆ, ಬಂಧನಕ್ಕೂ ಮೊದಲು ಟೈಲರ್ ತನ್ನ ತಂದೆಗೆ “ಪೊಲೀಸರಿಗೆ ಶರಣಾಗುವುದಕ್ಕಿಂತ ಆತ್ಮಹತ್ಯೆ ಮಾಡಿಕೊಂಡರೆ ಒಳಿತು” ಎಂದು ಹೇಳಿದ್ದಾನೆಂಬ ಮಾಹಿತಿ ಇದೆ. ಆದ್ದರಿಂದಲೇ ಅವನನ್ನು SHU ಗೆ ಸ್ಥಳಾಂತರಿಸಿ, 24 ಗಂಟೆಗಳ ಕಾಲ, ಪ್ರತಿ 15 ನಿಮಿಷಕ್ಕೊಮ್ಮೆ ನಿಗಾದಲ್ಲಿ ಇಡುವಂತೆ ಭದ್ರತಾ ಕ್ರಮ ಕೈಗೊಂಡಿದ್ದಾರೆ.
ರಾಬಿನ್ಸನ್ ವಿರುದ್ಧ ಗಂಭೀರ ಕೊಲೆ, ಮಾರಕಾಯುಧ ದಾಳಿ ಮತ್ತು ನ್ಯಾಯಕ್ಕೆ ಅಡ್ಡಿಪಡಿಸುವುದು ಎಂಬ ಆರೋಪಗಳು ದಾಖಲಾಗಿದ್ದು, ಅಧಿಕೃತ ಆರೋಪಪತ್ರ ಇನ್ನೂ ಹೊರಬರಬೇಕಾಗಿದೆ.
ಹಿನ್ನೆಲೆ:
ಬುಧವಾರ ಮಧ್ಯಾಹ್ನ ಉತಾಹ್ ವ್ಯಾಲಿ ವಿಶ್ವವಿದ್ಯಾಲಯ ಆವರಣದಲ್ಲಿ ಚಾರ್ಲಿ ಕಿರ್ಕ್ ಅವರ ಮೇಲೆ ಗುಂಡು ಹಾರಿಸಲಾಯಿತು. ಗಂಭೀರವಾಗಿ ಗಾಯಗೊಂಡ ಕಿರ್ಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಅಲ್ಲಿ ಪ್ರಾಣ ಕಳೆದುಕೊಂಡರು. ವೀಡಿಯೊ ದೃಶ್ಯಗಳಲ್ಲಿ ಕಪ್ಪು ಟಿ-ಶರ್ಟ್, ಕ್ಯಾಪ್ ಮತ್ತು ಸನ್‌ಗ್ಲಾಸ್ ಧರಿಸಿದ್ದ ಶೂಟರ್‌ನ ಗುರುತು ಪತ್ತೆ ಮಾಡಲು ಸಾರ್ವಜನಿಕರಿಂದ ಸಹಾಯ ಕೇಳಲಾಗಿತ್ತು. ನಂತರ ರಾಬಿನ್ಸನ್ ಬಂಧಿತನಾದ.
ಸಂಭವನೀಯ ಕಾರಣ ಅಫಿಡವಿಟ್ ಪ್ರಕಾರ, ರಾಬಿನ್ಸನ್ ತನ್ನ ಕುಟುಂಬದೊಂದಿಗೆ ಕಿರ್ಕ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದನೆಂಬುದು ತಿಳಿದುಬಂದಿದೆ.
ಚಾರ್ಲಿ ಕಿರ್ಕ್ (31) ಅವರನ್ನು ಪತ್ನಿ ಎರಿಕಾ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಶನಿವಾರ ಮೊದಲ ಬಾರಿಗೆ ಮಾತನಾಡಿದ ಎರಿಕಾ, “ಇದು ನಮ್ಮ ಜೀವನಕ್ಕೆ ಆದ ಆಗಿರುವ ಅತ್ಯಂದ ದೊಡ್ಡ ಆಘಾತʼ ಎಂದು ಕಣ್ಣೀರು ಹಾಕಿದರು.