ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ಕಳ್ಳತನ: ಎಫ್‌ಐಆರ್‌ ದಾಖಲು

ಬೆಂಗಳೂರು: ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರ ಹೊಸಕೆರೆಹಳ್ಳಿಯ ಪ್ರೆಸ್ಟೀಜ್ ಅಪಾರ್ಟ್​​ಮೆಂಟ್​ನಲ್ಲಿ ಕಳ್ಳತನವಾಗಿರುವ ಬಗ್ಗೆ ಮ್ಯಾನೇಜರ್ ನಾಗರಾಜ್ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ ಎಂದು ವರದಿಯಾಗಿದೆ.

ಸೆ. 4 -8 ರ ಅವಧಿಯಲ್ಲಿ ಈ ಕಳ್ಳತನ ಕೃತ್ಯ ನಡೆದಿದ್ದು ಸುಮಾರು 3 ಲಕ್ಷ ರೂಪಾಯಿ ಹಣವನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ವಿಜಯಲಕ್ಷ್ಮೀ ಅವರು ಮ್ಯಾನೇಜರ್ ನಾಗಾರಾಜು ಬಳಿ ಸ್ವಲ್ಪ ಹಣವನ್ನು ನೀಡಿ ಅದನ್ನು ಬೆಡ್​ರೂಂ ವಾರ್ಡ್​ರೋನಲ್ಲಿ ಇಡುವಂತೆ ಸೂಚಿಸಿದ್ದರು. ಆ ಬಳಿಕ ವಿಜಯಲಕ್ಷ್ಮೀ ಮೈಸೂರಿಗೆ ತೆರಳಿದ್ದರು. ಸೆ.8 ರಂದು ಮನೆಗೆ ಬಂದು ನೋಡಿದಾಗ ಹಣ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಮನೆ ಕೆಲಸದವರ ಬಳಿ ಕೇಳಿದಾಗ ಯಾರೂ ಕೂಡ ಹಣ ಕಳ್ಳತನವಾಗಿರುವ ಬಗ್ಗೆ ತಮಗೆ ಗೊತ್ತಿಲ್ಲ ಎಂದಿದ್ದಾರೆ. ಹೀಗಾಗಿ ಅವರು ದೂರು ದಾಖಲು ಮಾಡಿದ್ದಾರೆ.

ಮನೆ ಕೆಲಸದವರ ಮೇಲೆ ವಿಜಯಲಕ್ಷ್ಮೀ ಅನುಮಾನ ವ್ಯಕ್ತಪಡಿಸಿದ್ದು, ಮನೆ ಕೆಲಸದವರ ಮೇಲೆಯೇ ದೂರು ದಾಖಲು ಮಾಡಲಾಗಿದೆ. ದೂರಿನ ಬಳಿಕ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

error: Content is protected !!