ಮಂಗಳೂರು: ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಜಾನುವಾರು ಹತ್ಯೆ ಹಾಗೂ ಕಳವು ಆರೋಪಿ ಕುದ್ರೋಳಿ ಫೈಝಲ್ @ ಮಂಡಿ ಫೈಝಲ್ @ ಪಾಚ್ ಎಂಬಾತ ಈಗಾಗಲೇ 2ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡುಬಂದ ಹಿನ್ನೆಲೆ ತನಿಖಾಧಿಕಾರಿಗಳು ಈತನ ವಿರುದ್ಧ ಕಲಂ 111 ಬಿಎನ್‌ಎಸ್ ರಂತೆ ಪ್ರಕರಣ ದಾಖಲಿಸಿದ್ದಾರೆ.

ಈತನ ವಿರುದ್ಧ ಈಗಾಗಲೇ ದಾಖಲಾಗಿರುವ ಅ.ಕ್ರ. 150/2024, ಕಲಂ 4, 5, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ–2020 ಹಾಗೂ ಕಲಂ 303(2) ಅಡಿ ನಡೆಯುತ್ತಿರುವ ಪ್ರಕರಣಗಳ ತನಿಖೆ ನಡೆಸುತ್ತಿರುವಾಗ ಆರೋಪಿ 2ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ.
ಆರೋಪಿ ಕುದ್ರೋಳಿ ಫೈಝಲ್ ತನ್ನ ಸಹಚರರೊಂದಿಗೆ ಜಾನುವಾರು ಕಳ್ಳತನ ಮತ್ತು ಹತ್ಯೆಯಂತಹ ಕೃತ್ಯಗಳನ್ನು ನಿರಂತರವಾಗಿ ಎಸಗುತ್ತಿರುವುದು ತನಿಖೆಯಿಂದ ಬಹಿರಂಗವಾಗಿದೆ. ಈತ ಈಗಾಗಲೇ 2ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ತನಿಖಾಧಿಕಾರಿಗಳು ಈ ಪ್ರಕರಣದಲ್ಲಿ ಕಲಂ 111 ಬಿಎನ್‌ಎಸ್ ಅಳವಡಿಸಿಕೊಂಡು ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಈಗಾಗಲೇ ಆರೋಪಿಗಳ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.
ಸಂಘಟಿತ ಅಪರಾಧಕ್ಕೆ ಭಾರೀ ಶಿಕ್ಷೆ!
ಬಿಎನ್‌ಎಸ್ ಕಲಂ 111 ಪ್ರಕಾರ, ಸಂಘಟಿತ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು, ಒಳಸಂಚು ನಡೆಸುವುದು, ದುಷ್ಟೇರಣೆ ನೀಡುವುದು ಅಥವಾ ಯಾವುದೇ ರೀತಿಯಲ್ಲಿ ಅಪರಾಧ ಕೂಟದ ಸದಸ್ಯನಾಗಿರುವುದು ಸಾಬೀತಾದರೆ ತಪ್ಪಿತಸ್ಥನ ಮೇಲೆ ಕನಿಷ್ಠ 5 ವರ್ಷಗಳ ಕಾರಾಗೃಹ ಶಿಕ್ಷೆ, ಅತಿ ಹೆಚ್ಚು ಅಜೀವ ಕಾರಾಗೃಹ ಶಿಕ್ಷೆ ಅಥವಾ ರೂ. 5 ಲಕ್ಷವರೆಗೆ ದಂಡ ವಿಧಿಸುವಂಥ ಸಮಾನ ಅಪರಾಧವಾಗಿರುತ್ತದೆ ಎಂದು ಪೊಲೀಸ್ ಕಮೀಷನರ್ ಅವರ ಪ್ರಕಟಣೆ ತಿಳಿಸಿದೆ.