ಮಡಂತ್ಯಾರು: ಕುವೆಟ್ಟು ಗ್ರಾಮದ ನಾನಾಜೆ ಸಮೀಪದ ಬದ್ರಕಜೆ ಎಂಬಲ್ಲಿ ಅತ್ತೆಗೆ ದೊಣ್ಣೆಯಿಂದ ಹಲ್ಲೆಗೈದ ಅಳಿಯ ಅತ್ತೆ ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಲೀಲಾವತಿ ಹಲ್ಲೆಗೊಳಗಾದ ಮಹಿಳೆ, ಪುತ್ತೂರು ತಾಲೂಕಿನ ಕುರಿಯ ನಿವಾಸಿ ಕೂಲಿ ಕಾರ್ಮಿಕ ಸೂರಜ್ (32) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
12 ವರ್ಷಗಳ ಹಿಂದೆ ಲೀಲಾವತಿ ಅವರ ಪುತ್ರಿ ಚಂದ್ರಿಕಾ ಜೊತೆಗೆ ಸೂರಜ್‌ನ ವಿವಾಹ ನಡೆದಿತ್ತು. ಗಾರೆ ಕೆಲಸ ಮಾಡಿಕೊಂಡಿದ್ದ ಆತ ವಿಪರೀತ ಕುಡಿತದ ಚಟಕ್ಕೆ ಬಲಿಯಾಗಿದ್ದ. ಈ ಹಿಂದೆ ಕೂಡ ಪುತ್ತೂರಿನ ಮನೆಯಲ್ಲಿ ಪತ್ನಿಯೊಂದಿಗೆ ಜಗಳ ಮಾಡಿದ್ದ. ಈ ಕಾರಣಕ್ಕೆ ನಾಲ್ಕೈದು ವರ್ಷದಿಂದೀಚೆಗೆ ಚಂದ್ರಿಕಾ ಅವರು ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಇತ್ತೀಚೆಗೆ ಸೂರಜ್ ಕೂಡ ಅಲ್ಲಿಗೆ ಅವರೊಂದಿಗೆ ಇರಲಾರಂಭಿಸಿದ್ದ.
ಸೆ. 8ರಂದು ಬೆಳಗ್ಗೆ ಪತ್ನಿ ಚಂದ್ರಿಕಾ ಪೇಟೆಗೆ ಹೋಗಿದ್ದಾಗ ಅತ್ತೆಯ ಜೊತೆ ಜಗಳ ಆರಂಭಿಸಿದ ಆಳಿಯ ಸಿಟ್ಟಿನ ಭರದಲ್ಲಿ ದೊಣ್ಣೆಯಿಂದ ತಲೆಗೆ ಹೊಡೆದನು. ಗಂಭೀರ ಗಾಯವಾಗಿ ರಕ್ತ ಹರಿಯಲಾರಂಭಿಸಿತು. ಅವರ ಬೊಬ್ಬೆ ಕೇಳಿ ಪಕ್ಕದ ಮನೆಯವರು ಧಾವಿಸಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಇತ್ತ ಹಲ್ಲೆ ಮಾಡಿದ ಸೂರಜ್ ಮನೆಯ ಒಳಗಿನಿಂದ ಬಾಗಿಲಿನ ಬೀಗ ಹಾಕಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಿಟಕಿಯ ಮೂಲಕ ನೋಡಿದಾಗ ಕಂಡು ಬಂದಿದೆ.
ತಕ್ಷಣ ಹೆಂಚು ತೆಗೆದು ನೋಡಿ ರಕ್ಷಿಸಲು ಯತ್ನಿಸಿದರೂ ಆತ ಅದಾಗಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.