ಮಂಗಳೂರು: ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ರಥಬೀದಿ ಮಂಗಳೂರಿನಲ್ಲಿ ಅಮೃತ ಪ್ರಕಾಶ ಪತ್ರಿಕೆ ವತಿಯಿಂದ 114ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕರಾದ ಶ್ರೀ ಶ್ರೀನಿವಾಸ ಕೆ.ಟಿ. ಅವರು ಪ್ರಥಮ ಕನ್ನಡ ಪತ್ರಿಕೆ ಬಿಡುಗಡೆಯಾದದ್ದು ಮಂಗಳೂರಿನಲ್ಲಿ, ಅನೇಕ ಕವಿಗಳ ತವರೂರು ಮಂಗಳೂರು ಆದರೆ ಇತ್ತೀಚಿಗೆ ಸಾಹಿತ್ಯದ ಕಡೆಗೆ ಯುವ ಪೀಳಿಗೆಯ ಒಲವು ಕಡಿಮೆಯಾಗಿದ್ದು, ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು, ಸಾಹಿತ್ಯವನ್ನು ಸಮೃದ್ಧವಾಗಿ ಬೆಳೆಸಬೇಕು ಎಂದರು.
ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಬಳಕೆ ಅತಿ ಅಗತ್ಯ ಆದರೆ ನಾವು ಅವಶ್ಯಕತೆ ಇದ್ದಷ್ಟು ಬಳಸಬೇಕು. ಮೊಬೈಲ್ ಬಳಕೆಯಿಂದ ಅನೇಕ ಅನುಕೂಲಗಳಿವೆ ಆದರೆ ನಾವು ಬೇಕಾದ ಜ್ಞಾನವನ್ನು ವೃದ್ಧಿಗೊಳಿಸದೆ ಅನವಶ್ಯಕ ವಿಚಾರಗಳಿಗೆ ಗಮನಕೊಟ್ಟು ಬದುಕಿನ ರಸಗಳಿಗೆ ಹಾಗೂ ಅಭಿವೃದ್ಧಿಯನ್ನು ಕಳೆದುಕೊಳ್ಳುತ್ತಿದ್ದೇವೆ. ವಿದ್ಯಾರ್ಥಿಗಳು ಓದುವ ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀ ವೇಣುಶರ್ಮ ಸಂಸ್ಥಾಪಕರು ಮೈ ಅಂತರಾತ್ಮ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಹಾಗೂ ಅಂಕಣಕಾರರಾಗಿರುವ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪದುವಾ ಕಾಲೇಜಿನ ಉಪನ್ಯಾಸಕಿ ಹಾಗೂ ಲೇಖಕಿ ಶ್ರೀಮತಿ ಅಕ್ಷಯ ಆರ್ ಶೆಟ್ಟಿಯವರು ದಿನಪತ್ರಿಕೆ ವಾರಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪ್ರಾರಂಭದಲ್ಲಿ ನಿಮ್ಮ ತಿಳುವಳಿಕೆಗೆ ಬಂದಿರುವ ವಿಷಯಗಳನ್ನು ಅಕ್ಷರ ರೂಪದಲ್ಲಿ ಬರೆಯಿರಿ ಅನೇಕ ಸಲ ಬರೆದು ಓದಿದಾಗ ಶಬ್ದಗಳ ಶ್ರೀಮಂತಿಕೆ ಹಾಗೂ ಸೌಂದರ್ಯ ನಿಮ್ಮ ಅರಿವಿಗೆ ಬರುತ್ತದೆ ಎಂದು ನುಡಿದರು.
ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಊರ್ವ ಸ್ಟೋರ್(ರಿ) ಮಂಗಳೂರು ಇದರ ಅಧ್ಯಕ್ಷರಾಗಿರುವ ಶ್ರೀಮತಿ ಚಂಚಲ ತೇಜೋಮಯ ಅವರು ಮಕ್ಕಳಿಗೆ ಕಲಿಕೆ ಹಾಗೂ ವೃತ್ತಿಯೊಂದಿಗೆ ಹವ್ಯಾಸಗಳು ಬೇಕು. ಸಮಯವನ್ನು ವ್ಯರ್ಥ ಮಾಡದೆ ಸದುಪಯೋಗ ಮಾಡಬೇಕು ಸ್ಪರ್ಧಾತ್ಮಕ ಯುಗದಲ್ಲಿ ನಾವು ನಮ್ಮ ಕೌಶಲ್ಯದಿಂದ ಬದುಕಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಶ್ರೀಮತಿ ಮಾಲತಿ ಶೆಟ್ಟಿ ಮಾಣೂರವರು ಸ್ವಾಗತಿಸಿದರು ಶಿಕ್ಷಕಿ ಲೇಖಕಿ ಸುರೇಖಾ ಯಾಳವಾರ ಅವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.