ಮಂಗಳೂರಿನಲ್ಲಿ ವಿಜೃಂಭಣೆಯ ಓಣಂ ಹಬ್ಬ: ನಾಯರ್‌ ಸಮುದಾಯವನ್ನು ಶ್ಲಾಘಿಸಿದ ಸುಮನ್ ತಲ್ವಾರ್

ಮಂಗಳೂರು: ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ರಿ. (KNSS), ಮಂಗಳೂರು ಕರಯೋಗಂ ವತಿಯಿಂದ ಓಣಂ ಮಹೋತ್ಸವವನ್ನು ಸೆಪ್ಟೆಂಬರ್ 7ರಂದು ಕದ್ರಿ ಪಾರ್ಕ್ ಎದುರಿನ ಶ್ರೀ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಖ್ಯಾತ ಬಹುಭಾಷಾ ನಟ ಡಾ. ಸುಮನ್ ತಲ್ವಾರ್ ಮುಖ್ಯ ಅತಿಥಿಯಾಗಿ ಹಾಜರಿದ್ದು, ನಾಯರ್ ಹಾಗೂ ಕೇರಳ ಸಮುದಾಯವು ಭಾರತೀಯ ಸಂಸ್ಕೃತಿಗೆ ನೀಡಿರುವ ಅಪಾರ ಕೊಡುಗೆಯನ್ನು ಶ್ಲಾಘಿಸಿದರು. ಮಂಗಳೂರು ಕರಯೋಗಂ ನಡೆಸುತ್ತಿರುವ ಸಾಮಾಜಿಕ–ಸಾಂಸ್ಕೃತಿಕ ಚಟುವಟಿಕೆಗಳನ್ನು ಹಾಗೂ ಸ್ಥಳೀಯ ಸಮುದಾಯದೊಂದಿಗೆ ಬೆಸೆಯುವ ಬಾಂಧವ್ಯವನ್ನು ಅವರು ಮೆಚ್ಚಿಕೊಂಡರು.

ಕೇರಳದ ಕೊಟ್ಟಾರಕ್ಕರದ ಸಂಶೋಧನಾ ವಿದ್ಯಾರ್ಥಿನಿ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಶಾಲಿ ಪ್ರಿಯಂವದ ಕೆ. ಪಿಶಾರಡಿ ಅವರು ಉಪನ್ಯಾಸ ನೀಡಿ, ಹಿಂದೂ ಸಂಪ್ರದಾಯಗಳು, ಸಾಹಿತ್ಯ, ನೀತಿಯ ಮಹತ್ವವನ್ನು ಪ್ರತಿಪಾದಿಸಿ, ವೇದ, ಉಪನಿಷತ್ತು, ರಾಮಾಯಣ ಮತ್ತು ಮಹಾಭಾರತವು ಭಾರತೀಯ ಪರಂಪರೆಯ ದಾರಿದೀಪಗಳು ಎಂದು ತಿಳಿಸಿದರು. ಮಕ್ಕಳಲ್ಲಿ ಧಾರ್ಮಿಕ ಹಾಗೂ ಸಂಸ್ಕೃತಿಯ ಮೌಲ್ಯಗಳನ್ನು ಬಾಲ್ಯದಿಂದಲೇ ಬೆಳೆಸುವ ಅಗತ್ಯತೆಯನ್ನು ಅವರು ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಮೂಕಾಂಬಿಕಾ ದೇವಾಲಯದ ಟ್ರಸ್ಟಿ ಪಿ. ವಿ. ಅಭಿಲಾಶ್, ರೆಡ್ ಕ್ರಾಸ್ ಅಧ್ಯಕ್ಷ ಶಾಂತರಾಮ ಶೆಟ್ಟಿ, ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯರು ಐವನ್ ಡಿ’ಸೋಜಾ, ಕಿಶೋರ್ ಕುಮಾರ್ ಬೊಟ್ಯಾಡಿ, ಬಂಟ್ಸ್ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಳ, ಜೊತೆಗೆ ಬ್ಯಾಂಕಿಂಗ್, ಕಲಾ ಹಾಗೂ ಸಮಾಜಸೇವಾ ಕ್ಷೇತ್ರದ ಅನೇಕ ಗಣ್ಯರು ಪಾಲ್ಗೊಂಡರು. ಮಹಿಳಾ ವಿಭಾಗ ಕಾರ್ಯದರ್ಶಿ ಲತಾ ದಿವಾಕರ್, ಖಜಾಂಚಿ ಜಯಲಕ್ಷ್ಮಿ ಚಂದ್ರಮೋಹನ್, ಮಂಡಳಿ ಸದಸ್ಯರು ಎಂ.ವಿ. ರಾಜನ್, ಪಿ.ಕೆ.ಎಸ್. ಪಿಳ್ಳೈ ಹಾಗೂ ಇತರರು ಸಹ ಹಾಜರಿದ್ದರು.

ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕೋಯಿಕೋಡ್ ಟೈಮ್ ಜೋಕ್ಸ್ ತಂಡದ ಹಾಸ್ಯ–ಕರೋಕೆ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು. ಸನ್ಮಾನ ಸಮಾರಂಭದಲ್ಲಿ ಪಿ. ವಿ. ಅಭಿಲಾಶ್, ಡಾ. ಸುಮನ್ ತಲ್ವಾರ್, ಶ್ರೀ ಕೃಷ್ಣನ್ ನಾಯರ್ ಅವರಿಗೆ ಗೌರವ ಸಲ್ಲಿಸಲಾಯಿತು. ರಾಜ್ಯ ಮಟ್ಟದ ಹೈ ಜಂಪ್ ಪದಕ ವಿಜೇತೆ ದಿಯಾ ಭಂಡಾರಿ, ತುಳು ಚಿತ್ರ ನೆತ್ತೆರೆಕೆರೆ ತಂಡ ಹಾಗೂ ನಾಯರ್ ಸಮುದಾಯದ ಸಾಧಕರಿಗೆ ಸನ್ಮಾನ ನೀಡಲಾಯಿತು.

ಸಂಸ್ಥೆಯ ಅಧ್ಯಕ್ಷ ಮುರಳಿ ನಾಯರ್ ಹೊಸಮಜಲು ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ವಿ. ಎಂ. ಸತೀಶನ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ವಂದನೆಯನ್ನು ಖಜಾಂಚಿ ರವೀಂದ್ರನಾಥ ಸಲ್ಲಿಸಿದರು. ಕಾರ್ಯಕ್ರಮವನ್ನು ನವ್ಯಾ ಕೂರುಪ್ ಮತ್ತು ನೀತು ಲಕ್ಷ್ಮಿ ಸುಂದರವಾಗಿ ನಿರೂಪಿಸಿದರು. ಆಗಮಿಸಿದವರು ರುಚಿಕರವಾದ ಸಾಂಪ್ರದಾಯಿಕ ಓಣಂ ಖಾದ್ಯ ಸವಿದರು.

 

 

 

 

error: Content is protected !!