ಹುಲಿವೇಷದ ಮೂಲ ಪರಂಪರೆ ಉಳಿಸಲು ಅ.1ರಂದು ಪಿಲಿನಲಿಕೆ ಸ್ಪರ್ಧೆ: ಮಿಥುನ್‌ ರೈ

ಮಂಗಳೂರು: ಪಿಲಿನಲಿಕೆ ಪ್ರತಿಷ್ಠಾನ (ರಿ.) ಮತ್ತು ನಮ್ಮ ಟಿವಿ ಸಹಯೋಗದಲ್ಲಿ ಆಯೋಜಿಸಿರುವ “ಪಿಲಿನಲಿಕೆ-10” ಸ್ಪರ್ಧೆ ಅಕ್ಟೋಬರ್ 1, ಬುಧವಾರ ಬೆಳಿಗ್ಗೆ 10.00 ಗಂಟೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದ ಬಳಿಯ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಮಿಥುನ್‌ ರೈ ಹೇಳಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತುಳುನಾಡಿನ ಸಾಂಪ್ರದಾಯಿಕ ಹುಲಿವೇಷ ಕುಣಿತದ ಮೂಲ ಪರಂಪರೆ ಉಳಿಸಿ ಬೆಳೆಸುವ ಉದ್ದೇಶದೊಂದಿಗೆ ಆರಂಭವಾದ ಪಿಲಿನಲಿಕೆ ಸ್ಪರ್ಧೆ ಈಗ 9 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿ, 10ನೇ ವರ್ಷದ ಪ್ರಯಾಣವನ್ನು ತಲುಪಿದೆ. ಈ ಬಾರಿ ತುಳುನಾಡಿನ ಪ್ರಸಿದ್ಧ ಹಾಗೂ ಆಹ್ವಾನಿತ ತಂಡಗಳು ಪಾಲ್ಗೊಳ್ಳಲಿದೆ ಎಂದರು.

ಪ್ರಥಮ ಬಹುಮಾನವಾಗಿ ರೂ.10,00,000/- ನಗದು ಹಾಗೂ ಫಲಕ, ದ್ವಿತೀಯ ಬಹುಮಾನವಾಗಿ ರೂ.5,00,000/- ಹಾಗೂ ಫಲಕ, ತೃತೀಯ ಬಹುಮಾನವಾಗಿ ರೂ.3,00,000/- ಹಾಗೂ ಫಲಕ ನೀಡಲಾಗುವುದು. ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಮರಿಹುಲಿ, ಕರಿಹುಲಿ, ಮುಡಿ ಎಸೆತಗಾರ, ತಾಸೆ, ಬಣ್ಣಗಾರಿಕೆ ಮತ್ತು ಅತ್ಯುತ್ತಮ ಹುಲಿ ಕುಣಿತಕ್ಕೆ ತಲಾ ರೂ.50,000/- ನಗದು ಬಹುಮಾನ ನೀಡಲಾಗುತ್ತದೆ. ಪ್ರತಿ ತಂಡಕ್ಕೂ ರೂ.50,000/- ಪ್ರೋತ್ಸಾಹಕ ಬಹುಮಾನ ನೀಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳಲಿದ್ದು, ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಗೌರವಿಸಲಾಗುವುದು. ಶಮಾನೋತ್ಸವದ ಅಂಗವಾಗಿ ಪಿಲಿನಲಿಕೆ ಪ್ರತಿಷ್ಠಾನವು ಒಂದು ಸರ್ಕಾರಿ ಶಾಲೆಯನ್ನು ದತ್ತು ಸ್ವೀಕರಿಸಲು ನಿರ್ಧರಿಸಿದೆ ಎಂದು ವಿವರಿಸಿದರು.

ಸಾಂಪ್ರದಾಯಿಕ ನಿಯಮಾವಳಿಯಂತೆ ಸ್ಪರ್ಧೆಯಲ್ಲಿ ಚುಕ್ಕಿ, ಬೆಂಗಾಲಿ ಮತ್ತು ಕರಿ ಹುಲಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಪ್ರತೀ ತಂಡದಲ್ಲಿ ಕನಿಷ್ಠ 15 ಹುಲಿಗಳು ಕಡ್ಡಾಯವಾಗಿದ್ದು, ಗರಿಷ್ಠ 20 ನಿಮಿಷಗಳ ಕಾಲ ಪ್ರದರ್ಶನ ನೀಡಬಹುದು. ಮರಿ ಹುಲಿ (10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಕಡ್ಡಾಯವಾಗಿರಬೇಕು. ಬಣ್ಣಗಾರಿಕೆ, ತಾಸೆ, ಮುಡಿ ಎಸೆತ ಮತ್ತು ಕುಣಿತಕ್ಕೆ ವಿಶೇಷ ಅಂಕಗಳನ್ನು ನೀಡಲಾಗುವುದು. ಪ್ರತೀ ತಂಡವು ಆಯೋಜಕರ ಒದಗಿಸುವ 38 ಕೆ.ಜಿ ಭಾರದ ಮುಡಿಯನ್ನು ಬಳಸಬೇಕಾಗಿದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ನುಡಿದರು.

ಹುಲಿವೇಷ ತಂಡಗಳು ತಮ್ಮ ನೋಂದಣಿಯನ್ನು ಶೀಘ್ರದಲ್ಲೇ ಮಾಡಿಕೊಳ್ಳಬೇಕೆಂದು ಆಯೋಜಕರು ತಿಳಿಸಿದ್ದಾರೆ. ದಶಮಾನೋತ್ಸವದ ವೈಶಿಷ್ಟ್ಯವಾಗಿ ಬಾಲಿವುಡ್, ಸ್ಯಾಂಡಲ್‌ವುಡ್, ಕೋಸ್ಟಲ್‌ವುಡ್ ಖ್ಯಾತ ತಾರೆಯರು ಮತ್ತು ಕ್ರಿಕೆಟ್ ಕ್ಷೇತ್ರದ ದಿಗ್ಗಜರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳಲಿದ್ದು, ಸಹಕಾರ ರತ್ನ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಗೌರವಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಡಾ.ಶಿವಶರಣ್ ಶೆಟ್ಟಿ, ಅವಿನಾಶ್, ವಿಕಾಸ್, ಆನಂದ್ ರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!