ಪುತ್ತೂರಿನ ಮೊದಲ ಕಿನ್ನಿಪಿಲಿ ʼಪಿಲಿ ರಾಧಣ್ಣʼ ಖ್ಯಾತಿಯ ರಾಧಾಕೃಷ್ಣ ಶೆಟ್ಟಿ ನಿಧನ !

ಪುತ್ತೂರು: ಪುತ್ತೂರಿನ ಪಿಲಿ (ಹುಲಿ ಕುಣಿತ) ಪರಂಪರೆಗೆ ತನ್ನದೇ ಶೈಲಿಯ ಹೆಜ್ಜೆಯ ಹೆಗ್ಗುರುತಿನ ಬ್ರ್ಯಾಂಡ್ ತಂದುಕೊಟ್ಟ ಕೆಮ್ಮಾಯಿ ನಿವಾಸಿ ಪಿಲಿ ರಾಧಣ್ಣ ಖ್ಯಾತಿಯ ರಾಧಾಕೃಷ್ಣ ಶೆಟ್ಟಿ (59) ಇಂದು(ಸೆ.6) ಮುಂಜಾನೆ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅನಾರೋಗ್ಯದ ಕಾರಣದಿಂದ ಅವರನ್ನು ಶುಕ್ರವಾರದಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹತ್ತೂರಿನಲ್ಲಿ ಪಿಲಿ ರಾಧಣ್ಣ ಎಂದೇ ಹೆಸರುವಾಸಿಯಾಗಿರುವ ರಾಧಾಕೃಷ್ಣ ಶೆಟ್ಟಿ ಆಚರಣೆಯ ಸಂಪ್ರದಾಯಕ್ಕೆ ಎಳ್ಳಷ್ಟು ಚ್ಯುತಿ ಬಾರದ ಹಾಗೆ ವೇಷ ಹಾಕುವುದು ಮತ್ತು ಕುಣಿಯುವುದು ಅವರ ವಿಶೇಷತೆ.

65 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಇದದ್ದು ಎರಡು ಪಿಲಿ. ಒಂದು ಪಿಲಿ ಸಂಕಪ್ಪಣ್ಣ, ಇನ್ನೊಂದು ಪಿಲಿ ಗಂಗಣ್ಣ. ಪಿಲಿ ಸಂಕಪ್ಪ ಶೆಟ್ಟಿ ಅವರ ಪುತ್ರನೇ ಪಿಲಿ ರಾಧಣ್ಣ. ಸಂಕಪ್ಪ ಅವರು ಸುಮಾರು 30 ವರ್ಷಗಳ ಕಾಲ ಕುಣಿದವರು. ರಾಧಾಕೃಷ್ಣ ಶೆಟ್ಟಿ ಅವರಿಗೆ 9 ವರ್ಷ (4ನೇ ತರಗತಿ) ಇರುವಾಗ ತಂದೆ ಸಂಕಪ್ಪ ಅವರು ಕಿನ್ನಿಪಿಲಿ (ಮರಿ ಹುಲಿ) ವೇಷಧಾರಿಯಾಗಿ ಸೇರಿಸಿಕೊಂಡರು. ಅಲ್ಲಿಂದ ಪಿಲಿ ವೇಷ ಹಾಕಲು ಶುರು ಮಾಡಿದ ಅವರು ಪುತ್ತೂರಿನ ಮೊದಲ ಕಿನ್ನಿ ಪಿಲಿ ಎಂಬ ಖ್ಯಾತಿ ಪಡೆದುಕೊಂಡರು.

ಅಪ್ಪ-ಮಗ ಇಬ್ಬರು 10 ವರ್ಷಗಳ ಕಾಲ ಜತೆ ಜತೆಯಾಗಿ ಹೆಜ್ಜೆ ಹಾಕಿದರು. ಕಿನ್ನಿ ಪಿಲಿಯಾಗಿ ಟೋಪಿ ಹಾಕಿಕೊಂಡು ಹೊರಟ ಪುಟ್ಟ ಬಾಲಕ ಮುಂದೆ ಪಿಲಿ ರಾಧಣ್ಣ ಆಗಿ ಗುರುತಿಸಿಕೊಂಡರು. ಅವರ ಹುಲಿ ಸೇವೆಗೆ ಕಳೆದ ವರ್ಷಕ್ಕೆ 48 ವರ್ಷ.

error: Content is protected !!