ಇಂದೋರ್: ಇಂದೋರ್ ನ ಮಹಾರಾಜ ಯಶವಂತರಾವ್ ಸರಕಾರಿ ಆಸ್ಪತ್ರೆಯಲ್ಲಿ ಇಲಿ ಕಡಿತದಿಂದ ಮತ್ತೊಂದು ನವಜಾತ ಶಿಶು ಮೃತಪಟ್ಟಿದ್ದು, ಶಿಶುವಿನ ಸಾವಿಗೆ ರಕ್ತದ ಸೋಂಕು ಕಾರಣವೇ ಹೊರತು, ಇಲಿ ಕಡಿತವಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ಬುಧವಾರ ಮೃತಪಟ್ಟ ಈ ನವಜಾತ ಶಿಶುವನ್ನು ಅದರ ಸಂಬಂಧಿಕರ ಇಚ್ಛೆಯಂತೆ ಮರಣೋತ್ತರ ಪರೀಕ್ಷೆ ನಡೆಸದೆ ಹಸ್ತಾಂತರಿಸಲಾಯಿತು ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಕ್ಕೂ ಮುನ್ನ, ಇಲಿ ಕಡಿತಕ್ಕೆ ಈಡಾಗಿದ್ದ ನವಜಾತ ಶಿಶುವೊಂದು ಮಂಗಳವಾರ(ಸೆ.2) ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿತ್ತು.
ಇಲಿ ಕಡಿತದಿಂದ ಇಬ್ಬರು ನವಜಾತ ಹೆಣ್ಣು ಶಿಶುಗಳ ಸಾವಿನ ನಂತರ ಸಾರ್ವಜನಿಕರು ತೀವ್ರ ಆಕ್ರೋಶಕ್ಕೆ ಒಳಪಟ್ಟಿದ್ದು, ಈ ಶಿಶುಗಳ ಮರಣೋತ್ತರ ಪರೀಕ್ಷೆ ನಡೆಸದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298
ಇಂದೋರ್ ನಲ್ಲಿನ ಸರಕಾರಿ ಮಹಾತ್ಮ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನ ಅಧೀನಕ್ಕೆ ಒಳಪಟ್ಟಿರುವ ಈ ಆಸ್ಪತ್ರೆಯಲ್ಲಿ ಸಂಭವಿಸಿದ ಇಬ್ಬರು ನವಜಾತ ಶಿಶುಗಳ ಮರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಕಲಾಗಿದ್ದು, ನಿರ್ಲಕ್ಷ್ಯದ ಆರೋಪದ ಮೇಲೆ ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವರು, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಇಂದೋರ್ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಮಧ್ಯಪ್ರದೇಶ ಮುಖ್ಯ ಮಂತ್ರಿ ಮೋಹನ್ ಯಾದವ್ ತಿಳಿಸಿದ್ದಾರೆ.
ಸಾರ್ವಜನಿಕ ಆರೋಗ್ಯ ಮತ್ತು ಚಿಕಿತ್ಸೆ ವಲಯದಲ್ಲಿ ಸರಕಾರ ಯಾವುದೇ ಬಗೆಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದೂ ಅವರು ಎಚ್ಚರಿಸಿದ್ದಾರೆ.