ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 90 ದಿನಗಳ ಅಭಿಯಾನ, ಸೆ.13ರಂದು ಲೋಕ್‌ ಅದಾಲತ್

ಮಂಗಳೂರು: ʻರಾಷ್ಟ್ರಕ್ಕಾಗಿ ಮಧ್ಯಸ್ಥಿಕೆʼ ಎಂಬ 90 ದಿನಗಳ ಮಧ್ಯಸ್ಥಿಕಾ ಅಭಿಯಾನ ಜುಲೈ 1ರಿಂದ ದೇಶಾದ್ಯಂತ ಪ್ರಾರಂಭಗೊಂಡಿದ್ದು, ಅಕ್ಟೋಬರ್ 7ರವರೆಗೆ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 13ರಂದು ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮೂಡುಬಿದಿರೆ ಹಾಗೂ ಸುಳ್ಯ ನ್ಯಾಯಾಲಯಗಳ ಆವರಣದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಮತ್ತು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಸವರಾಜ  ತಿಳಿಸಿದ್ದಾರೆ.

ನಿನ್ನೆ ನ್ಯಾಯಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತಾಡಿದರು.

ಅಭಿಯಾನದಲ್ಲಿ ಜಿಲ್ಲೆಯ 50ಕ್ಕೂ ಹೆಚ್ಚು ನುರಿತ ವಕೀಲರು ಮಧ್ಯಸ್ಥಿಕಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಇದು ಸುವರ್ಣಾವಕಾಶವಾಗಿದೆ ಎಂದು ಹೇಳಿದರು.

ಯಾವ ಪ್ರಕರಣಗಳು ಬಗೆಹರಿಯುತ್ತವೆ?

  • ಮೋಟಾರು ವಾಹನ ಅಪಘಾತ ಪ್ರಕರಣಗಳು

  • ಚೆಕ್ ಅಮಾನ್ಯತೆ ಹಾಗೂ ಬ್ಯಾಂಕ್ ಸಾಲ ವಸೂಲಾತಿ

  • ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು

  • ಕಾರ್ಮಿಕ ಹಾಗೂ ನಷ್ಟ ಪರಿಹಾರ ವಿವಾದಗಳು

  • ವಿಚ್ಛೇದನ ಹೊರತುಪಡಿಸಿದ ವೈವಾಹಿಕ ಪ್ರಕರಣಗಳು

  • ಗ್ರಾಹಕರ ವಿವಾದಗಳು

  • ಭೂಸ್ವಾಧೀನ ಪರಿಹಾರ ಹಂಚಿಕೆ

  • ವಿದ್ಯುತ್ ಹಾಗೂ ನೀರಿನ ಬಾಕಿ ಶುಲ್ಕ ಪ್ರಕರಣಗಳು

  • ಸೇವಾ–ಪಿಂಚಣಿ, ವೇತನ ಭತ್ಯೆ ಪ್ರಕರಣಗಳು

  • ಜನನ ಪ್ರಮಾಣ ಪತ್ರ ಸಂಬಂಧಿತ ಪ್ರಕರಣಗಳು

  • ಇತರ ಸಿವಿಲ್ ಹಾಗೂ ಕ್ರಿಮಿನಲ್ ರಾಜಿಯಾಗಬಲ್ಲ ಪ್ರಕರಣಗಳು

ಮಧ್ಯಸ್ಥಿಕೆಯ ಲಾಭ

  • ಕಡಿಮೆ ಖರ್ಚಿನಲ್ಲಿ ಶೀಘ್ರ ನ್ಯಾಯ

  • ರಾಜಿ ಒಪ್ಪಂದದ ಮೂಲಕ ಇಬ್ಬರೂ ಪಕ್ಷಗಳು ತೃಪ್ತಿಗೊಳ್ಳುವ ಅವಕಾಶ

  • ಪಾವತಿಸಿದ ನ್ಯಾಯಾಲಯ ಶುಲ್ಕ ಮರುಪಾವತಿ

  • ಮೇಲ್ಮನವಿ ಸಲ್ಲಿಸಲು ಅಗತ್ಯವಿಲ್ಲ

ಸಂಚಾರಿ ದಂಡದಲ್ಲಿ ಶೇ.50 ರ ರಿಯಾಯಿತಿ

ಸಾರಿಗೆ ಇಲಾಖೆಯ ಆದೇಶದಂತೆ ಇ-ಚಲನ್‌ನಲ್ಲಿ ದಾಖಲಾಗಿರುವ ಸಂಚಾರಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರ ರಿಯಾಯಿತಿ ಲಭ್ಯ.

  • ರಿಯಾಯಿತಿ ಅವಧಿ: ಆ.23ರಿಂದ ಸೆ.12ರವರೆಗೆ

  • ಸೆ.13ರ ಲೋಕ್ ಅದಾಲತ್ ದಿನಕ್ಕೂ ಅನ್ವಯಿಸುತ್ತದೆ

ಸುದ್ದಿಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸ ಉಪಸ್ಥಿತರಿದ್ದರು.

error: Content is protected !!