ಬೆಳ್ಳಾಯರು ಗ್ರಾಮದ ಕೆರೆಕಾಡುವಿನಲ್ಲಿ ₹45 ಲಕ್ಷ ವೆಚ್ಚದ ಜಲ್ ಜೀವನ್ ಮಿಷನ್ ಯೋಜನೆ ಲೋಕಾರ್ಪಣೆ

ಪಡುಪಣಂಬೂರು: ಸ್ಥಳೀಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಾಯರು ಗ್ರಾಮದ ಕೆರೆಕಾಡು ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ʻಜಲ್ ಜೀವನ್ ಮಿಷನ್’ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ವಿವಿಧ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ.

ಸುಮಾರು 45 ಲಕ್ಷ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಇದರಲ್ಲಿ ನೂತನ ನೀರಿನ ಟ್ಯಾಂಕ್ ರಚನೆ, ಬೋರ್‌ವೆಲ್ ಕೊರೆಯುವಿಕೆ ಹಾಗೂ ಮನೆಮನೆಗೆ ನೀರು ತಲುಪಿಸಲು ಪೈಪ್‌ಲೈನ್ ವಿಸ್ತರಣಾ ಕಾರ್ಯಗಳನ್ನು ಒಳಗೊಂಡಿದೆ. ಈ ಯೋಜನೆಯಿಂದಾಗಿ ಕೆರೆಕಾಡು ಪರಿಸರದ ನಿವಾಸಿಗಳ ದಶಕಗಳ ಕಾಲದ ಕುಡಿಯುವ ನೀರಿನ ಸಮಸ್ಯೆಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ.

ಈ ಭಾಗದ ಜನರ ನೀರಿನ ಬೇಡಿಕೆಗೆ ಸ್ಪಂದಿಸಿ, ಯೋಜನೆಗೆ ಅನುದಾನ ಒದಗಿಸುವಲ್ಲಿ ಶ್ರಮಿಸಿದ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಮೂಲ್ಕಿ-ಮೂಡಬಿದಿರೆ ಕ್ಷೇತ್ರದ ಶಾಸಕರಾದ ಉಮಾನಾಥ್ ಎ. ಕೋಟ್ಯಾನ್ ಹಾಗೂ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಗ್ರಾಮಸ್ಥರು ಹಾಗೂ ಪಡುಪಣಂಬೂರು ಗ್ರಾಮ ಪಂಚಾಯತ್ ಆಡಳಿತವು ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದೆ.

ಈಗಾಗಲೇ ಕಾಮಗಾರಿಗಳು ಮುಗಿದು ನೀರು ಸರಬರಾಜು ಆರಂಭವಾಗಿದ್ದು, ಸ್ಥಳೀಯ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಇಂತಹ ಜನಪದ ಯೋಜನೆಗಳು ಗ್ರಾಮೀಣ ಭಾಗದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಸ್ಥಳೀಯ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

error: Content is protected !!