ಮಂಗಳೂರು: ಮಂಗಳೂರಿನಲ್ಲಿ ಶಿಶು ಮಾರಾಟ ಜಾಲ ಮತ್ತೆ ಬಯಲಾಗಿದ್ದು, ಇದರಲ್ಲಿ ಕಂಕನಾಡಿ ಸಮೀಪದ ಖಾಸಗಿ ಆಸ್ಪತ್ರೆಯೊಂದರ ಕೈಚಳಕ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಕಾಪುವಿನ ಶಿರ್ವಾ ಪೊಲೀಸರು ಬಂಟ್ವಾಳದ ವೈದ್ಯ ಡಾ. ಸೋಮೇಶ್ ಸೊಲೊಮನ್, ಪಂಪ್‌ವೆಲ್ ಪಿಜಿ ಮಾಲಕಿ ಹಾಗೂ ದುರ್ಗಾವಾಹಿನಿ ಮುಖಂಡೆ ವಿಜಯಲಕ್ಷ್ಮಿ ಅಲಿಯಾಸ್ ವಿಜಯ, ಮತ್ತು ಅತ್ಯಾಚಾರ ಆರೋಪಿ ನವನೀತ್ ನಾರಾಯಣರನ್ನು ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾರೆ.
ಹೇರೂರು ಗ್ರಾಮದ ಕಲ್ಲಗುಡ್ಡೆ ಪ್ರಭಾವತಿ – ರಮೇಶ್ ಮೂಲ್ಯ ದಂಪತಿ ನಾಲ್ಕು ದಿನದ ಶಿಶುವನ್ನು ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಟ್ರ್ಯಾಕರ್‌ಗೆ ರಿಜಿಸ್ಟರ್ ಮಾಡಲು ಕರೆದುಕೊಂಡು ಹೋಗಿದ್ದರು. ಆದರೆ ಮಗು ಈ ದಂಪತಿಯದ್ದೇ ಅಲ್ಲ ಎಂಬ ಅನುಮಾನ ಅಂಗನವಾಡಿ ಕಾರ್ಯಕರ್ತೆಗೆ ಹುಟ್ಟಿತ್ತು. ವಿಚಾರಣೆ ನಡೆಸಿದಾಗ ಮಗುವಿನ ರಹಸ್ಯ ಬಹಿರಂಗವಾಯಿತು.
ಮಗು ಸೆ.3ರಂದು ಮಂಗಳೂರಿನ ಕುಲಾಸೋ ಆಸ್ಪತ್ರೆಯಲ್ಲಿ ಅವಿವಾಹಿತೆಯೊಬ್ಬಳಿಗೆ ಜನಿಸಿದ್ದು, ಪ್ರಭಾವತಿಯವರ ಚಿಕ್ಕಮ್ಮನ ಮಗಳು ಪ್ರಿಯಾಂಕ ವೈದ್ಯರ ಮೂಲಕ ₹4.5 ಲಕ್ಷ ನೀಡಿ ಮಗುವನ್ನು ತಂದಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮಾನಸಿಕ ಆಸ್ವಸ್ಥೆಯಾಗಿದ್ದ ಮಗುವಿನ ತಾಯಿ ಅತ್ಯಾಚಾರಕ್ಕೆ ಒಳಗಾಗಿದ್ದು, ಆಕೆಯ ಪರಿಚಯದ ನವನೀತ್ ನಾರಾಯಣ ಅತ್ಯಾಚಾರ ನಡೆಸಿದ್ದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ವಿಜಯಲಕ್ಷ್ಮೀ ಅವಿವಾಹಿತ ಮಹಿಳೆ ಮತ್ತು ಆಕೆಯ ತಾಯಿಗೆ ತಮ್ಮ ಪಿಜಿಯಲ್ಲಿ ಕೆಲಸ ಕೊಡಿಸಿ ಆಶ್ರಯ ನೀಡಿದ್ದು, ಹುಟ್ಟಿದ ಮಗುವನ್ನು ಮಕ್ಕಳಿಲ್ಲದ ದಂಪತಿಗೆ ಒದಗಿಸುವ ದುರಾಲೋಚನೆ ನಡೆಸಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಳ ಡಿವೈಎಸ್‌ಪಿ ಡಾ| ಹರ್ಷಾ ಪ್ರಿಯಂವದಾ ಅವರ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ