145 ಬಲೂಚ್‌ ಉಗ್ರರ ಹತ್ಯೆ!

 

ಇಸ್ಲಾಮಾಬಾದ್‌: 40 ಗಂಟೆಗಳ ಕಾಲ ನಡೆದ ಗುಂಡಿನ ದಾಳಿಯಲ್ಲಿ 145 ಬಲೂಚ್‌ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿದೆ. ಪಾಕಿನ 80ಕ್ಕೂ ಹೆಚ್ಚು ಸೈನಿಕರನ್ನು ಬಲೂಚ್‌ ಬಂಡುಕೋರರು ಹತ್ಯೆ ಮಾಡಿದ ಬೆನ್ನಲ್ಲೇ ಭಾರೀ ಕಾರ್ಯಾಚರಣೆ ನಡೆಸಿದ ಸೇನೆ ಪ್ರತಿ ದಾಳಿ ನಡೆಸಿದೆ. ಪಾಕಿಸ್ತಾನದ ಸೇನೆಯು ಶನಿವಾರ 92 ಮಂದಿಯನ್ನು ಹತ್ಯೆ ಮಾಡಿದ್ದರೆ ಶುಕ್ರವಾರ 41 ಜನರನ್ನು ಕೊಂದಿದೆ. ಈ ಕಾರ್ಯಾಚರಣೆ ವೇಳೆ ಪಾಕಿಸ್ತಾನದ 17 ಮಂದಿ ಭದ್ರತಾ ಪಡೆಯ ಸಿಬ್ಬಂದಿಯೂ ಸಾವನ್ನಪ್ಪಿದ್ದಾರೆ.

ಸಾಮಾನ್ಯ ನಾಗರಿಕರಂತೆ ವೇಷ ಧರಿಸಿದ್ದ ಬಲೂಚ್‌ ಉಗ್ರರು ಶನಿವಾರ ಆಸ್ಪತ್ರೆ, ಶಾಲೆ, ಬ್ಯಾಂಕುಗಳು ಮತ್ತು ಮಾರುಕಟ್ಟೆಗಳಿಗೆ ನುಗ್ಗಿ ಗುಂಡು ಹಾರಿಸಿದರು. ನಾಗರಿಕರಂತೆ ವೇಷ ಧರಿಸಿ ಬಂದು ಅಂಗಡಿಗಳಲ್ಲಿ ಕೆಲಸ ಮಾಡುವ ಸಾಮಾನ್ಯ ಜನರನ್ನು ವಿವೇಚನೆಯಿಲ್ಲದೆ ಗುರಿಯಾಗಿಸಿಕೊಂಡು ಕೃತ್ಯ ಎಸಗಿದ್ದಾರೆ ಎಂದು ಪಾಕಿಸ್ತಾನದ ಕಿರಿಯ ಆಂತರಿಕ ಸಚಿವ ತಲಾಲ್ ಚೌಧರಿ ಹೇಳಿದ್ದಾರೆ. ಆಪರೇಷನ್ ಹೆರೋಫ್ ಫೇಸ್ II ಕಾರ್ಯಾಚರಣೆಯಲ್ಲಿ 80 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಗುಪ್ತಚರ ಸಂಸ್ಥೆಗಳು ಮತ್ತು ಭಯೋತ್ಪಾದನಾ ನಿಗ್ರಹ ಘಟಕಗಳ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಜ.31 ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿತ್ತು.

error: Content is protected !!