ಡೆಹರಾಡೂನ್: ಉತ್ತರಾಖಂಡದ ಹಲವಾರು ಜಿಲ್ಲೆಗಳಲ್ಲಿ ಶುಕ್ರವಾರ ಮುಂಜಾನೆ ಸುರಿದ ಭಾರಿ ಮಳೆಯ ಜೊತೆಗೆ ಸಂಭವಿಸಿದ ಮೇಘಸ್ಫೋಟ ಮತ್ತು ಭೂಕುಸಿತದಿಂದ ಕನಿಷ್ಠ ಐವರು ಮೃತಪಟ್ಟಿದ್ದು, ಮೂವರು ನಾಪತ್ತೆಯಾಗಿದ್ದಾರೆ.
ರಾಜ್ಯದ ಚಮೋಲಿ, ರುದ್ರಪ್ರಯಾಗ, ತೆಹ್ರಿ ಮತ್ತು ಬಾಗೇಶ್ವರ ಜಿಲ್ಲೆಗಳಲ್ಲಿ ಹಾನಿ ಪ್ರಮಾಣ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಗೇಶ್ವರ ಜಿಲ್ಲೆ: ಕಾಪ್ಕೋಟ್ ಪ್ರದೇಶದ ಪೌಸರಿ ಗ್ರಾಮ ಪಂಚಾಯತಿಯಲ್ಲಿ ಆರು ಮನೆಗಳು ಹಾನಿಗೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇನ್ನೂ ಮೂವರು ಕಾಣೆಯಾಗಿದ್ದಾರೆ.
ಚಮೋಲಿ ಜಿಲ್ಲೆ: ಮೊಪಾಟಾ ಗ್ರಾಮದಲ್ಲಿ ಭೂಕುಸಿತದ ಅವಶೇಷಗಳಡಿ ಮನೆ ಹಾಗೂ ಕೊಟ್ಟಿಗೆ ಹೂತುಹೋಗಿದ್ದು, ದಂಪತಿ ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ.
ರುದ್ರಪ್ರಯಾಗ ಜಿಲ್ಲೆ: ತಲ್ಜಮಾನ್ ಗ್ರಾಮದಲ್ಲಿ 30-40 ಕುಟುಂಬಗಳು ಅವಶೇಷ ಮತ್ತು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿದ್ದು, ಜಖೋಲಿಯಲ್ಲಿ ಮನೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಜೊತೆಗೆ ನಾಲ್ವರು ಸ್ಥಳೀಯರು ಮತ್ತು ನೇಪಾಳ ಮೂಲದವರು ಅವಶೇಷಗಳಡಿ ಸಿಲುಕಿರುವ ಮಾಹಿತಿ ಲಭ್ಯವಾಗಿದೆ.
ಸಿಎಂ ಧಾಮಿ ಪ್ರತಿಕ್ರಿಯೆ
ಘಟನೆ ಕುರಿತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರತಿಕ್ರಿಯಿಸಿ, “ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ. ನಾನು ಸ್ವತಃ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ,” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹೆದ್ದಾರಿ ಬಂದ್–ಎಚ್ಚರಿಕೆ ಘೋಷಣೆ
ಬದರಿನಾಥ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದ್ದು, ಪ್ರಯಾಣಿಕರಿಗೆ ಜಾಗ್ರತೆ ಸೂಚಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಬಾಗೇಶ್ವರ, ಚಮೋಲಿ, ಡೆಹರಾಡೂನ್ ಮತ್ತು ರುದ್ರಪ್ರಯಾಗ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಹಿಂದೆಯೂ ಆಗಸ್ಟ್ 5ರಂದು ಖೀರಗಂಗಾ ನದೀ ಪ್ರದೇಶದಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಐವರು ಸಾವನ್ನಪ್ಪಿ, 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.