ಮಂಗಳೂರು: ತಲಪಾಡಿ ಟೋಲ್‌ಗೇಟ್ ಬಳಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೇರಿದೆ. ಮೃತರಲ್ಲಿ ಐವರು ಒಂದೇ ಕುಟುಂಬಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಚಿಕಿತ್ಸೆಯು ನಡೆಯುತ್ತಿದೆ.
ಮೃತರನ್ನು ರಿಕ್ಷಾ ಚಾಲಕ ಕೋಟೆಕಾರ್ ಮುಳ್ಳುಗುಡ್ಡೆ ಅಜ್ಜಿನಡ್ಕ ನಿವಾಸಿ ಹೈದರ್ ಆಲಿ (47), ಬಿ.ಸಿ.ರೋಡ್ ಫರಂಗಿಪೇಟೆಯ ಅವ್ವಮ್ಮ, ಅಜ್ಜಿನಡ್ಕದ ಖತುಜಾ (60), ಹಸ್ನಾ, ನತೀಜಾ (52) ಮತ್ತು ಆಯೆಶಾ (19) ಎಂದು ಗುರುತಿಸಲಾಗಿದೆ. ಮೃತ ಐವರು ಕೋಟೆಕಾರ್ ಅಜ್ಜಿನಡ್ಕದ ನಿವಾಸಿಗಳೆಂದು ತಿಳಿದುಬಂದಿದೆ.
ಕೆ.ಸಿ.ರೋಡಿನಿಂದ ಬರುತ್ತಿದ್ದ ರಿಕ್ಷಾ ಮತ್ತು ಬಸ್ ನಡುವೆ ಮೊದಲ ಡಿಕ್ಕಿ ಸಂಭವಿಸಿದ್ದು, ಬಳಿಕ ನಿಯಂತ್ರಣ ತಪ್ಪಿದ ಬಸ್ ಹಿಂಬದಿಯಿಂದ ಮತ್ತೊಂದು ರಿಕ್ಷಾಗೆ ಬಡಿದಿದೆ. ಪರಿಣಾಮ, ಆ ರಿಕ್ಷಾ ಪಲ್ಟಿಯಾಗಿ ಪಾದಚಾರಿಗಳು ಸಹ ಗಾಯಗೊಂಡಿದ್ದಾರೆ.
ಈ ದುರ್ಘಟನೆಯಿಂದಾಗಿ ತಲಪಾಡಿ ಪ್ರದೇಶದಲ್ಲಿ ಭಾರಿ ಸಂಚಾರ ಅಡಚಣೆ ಉಂಟಾಗಿದೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಪ್ರಯಾಣಿಕರನ್ನು ತುಂಬಿಕೊಂಡಿದ್ದ ರಿಕ್ಷ ರಸ್ತೆ ಬಿಟ್ಟು ಪಕ್ಕದಲ್ಲೇ ತನ್ನ ಪಾಡಿಗೆ ತಾನು ತನ್ನ ವಾಹನವನ್ನು ನಿಲ್ಲಿಸಿದ್ದ, ಈ ವೇಳೆ ಬಸ್ ರಿವರ್ಸ್ ಬಂದು ರಿಕ್ಷಾವನ್ನು ಅಡಿಗೆ ಹಾಕಿದೆ. ಅಲ್ಲದೆ ಪಕ್ಕದಲ್ಲೇ ನಡೆದುದುಕೊಂಡಿ ಹೋಗುತ್ತಿದ್ದ ಪಾದಚಾರಿಗಳಿಬ್ಬರು ಕೂಡಾ ಗಂಭೀರ ಗಾಯಗೊಂಡಿದ್ದಾರೆ. ಬಸ್ ಚಾಲಕನ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎನ್ನಲಾಗಿದೆ.
ಸ್ಪೀಕರ್ ಖಾದರ್ ಸಂತಾಪ:
ಘಟನೆಯ ಬಗ್ಗೆ ಸ್ಪೀಕರ್ ಖಾದರ್ ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೃತರಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.